ಮಿನಿ ವಿಧಾನಸೌಧ, ಬಸ್ ನಿಲ್ದಾಣ ಉದ್ಘಾಟನೆ
ಜೇವರ್ಗಿ: ಕಳೆದ ದಶಕಗಳಿಂದ ನಡೆದ ಮಿನಿ ವಿಧಾನ ಸೌಧ ಕಾಮಗಾರಿಗೆ ಕೊನೆಗೂ ಕಾಯಕಲ್ಪ ದೊರಕಿ ಮಾ. 19ರಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಉದ್ಘಾಟಿಸಲಿದ್ದಾರೆ. ಇದರ ಜೊತೆಗೆ ಪಟ್ಟಣದಲ್ಲಿ ನಿರ್ಮಿಸಲಾದ ಹೈಟೆಕ್ ಬಸ್ ನಿಲ್ದಾಣ ಕೂಡ ಲೋಕಾಪರ್ಣೆಗೊಳ್ಳಲಿದೆ.
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಲೋಕಪಯೋಗಿ ಮಂತ್ರಿಯಾಗಿದ್ದಾಗ ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಕಾಮಗಾರಿಗೆ ಚಾಲನೆ ನೀಡಿದ್ದರು. ಈಗ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು ಕೂಡ ವಿಧಾನಸೌಧ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಹೆಚ್ಚುವರಿಯಾಗಿ ರು. 3 ಕೋಟಿ ಬಿಡುಗಡೆಗೊಳಿಸಿ ಸೌಧ ಅಂತಿಮ ಘಟ್ಟಕ್ಕೆ ತಲುಪಿಸಿ ಸಜ್ಜುಗೊಳಿಸಿದ್ದಾರೆ.
ಅನೇಕ ಬಾರಿ ಮಿನಿವಿಧಾನ ಸೌಧ ಹಾಗೂ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆಗೆ ಅನೇಕ ಬಾರಿ ದಿನಾಂಕ ನಿಗದಿಯಾಗಿತ್ತಾದರೂ, ಮುಖ್ಯಮಂತ್ರಿಗಳ ಬಿಡುವಿಲ್ಲದ ಕಾರ್ಯಕ್ರಮಗಳಿಂದ ಮಿನಿ ವಿಧಾನ ಸೌಧ ಮತ್ತು ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆ ಗೊಂಡಿರಲಿಲ್ಲ.
ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಳಿಸಬೇಕೆಂಬ ಹಂಬಲದಿಂದ ಉದ್ಘಾಟನೆಗೆ ವಿಳಂಬವಾಯಿತು. ಮಾ. 19ರಂದು ಶಾಸಕ ನರಿಬೋಳ ಅವರು ನಾಡಿನ ದೊರೆಯ ಮೂಲಕ ಉದ್ಘಾಟನೆಗೊಳಿಸುವ ಸಂಕಲ್ಪ ಈಗ ಕೂಡಿಬಂದಿದೆ. ಇದರ ಜೊತೆಗೆ ಕೋನಾ ಹಿಪ್ಪರಗಿ-ಸರಡಗಿ ಸೇತುವೆ ಕಾಮಗಾರಿಗೆ ಹಾಗೂ ಈ ಭಾಗದ ಮಹತ್ತರವಾದ ರೈತರ ಮಲ್ಲಾಬಾದ ಏತ ನೀರಾವರಿ ಯೋಜನೆ ಎರಡನೇ ಹಂತದ ಕಾಮಗಾರಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದೆ. ಪಟ್ಟಣದ ಸೌಂದರ್ಯ ಕರಣಕ್ಕಾಗಿ ರು. 8.25 ಕೋಟಿ ಬಿಡುಗಡೆಯಾದ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.