ಮಹಾರಾಷ್ಟ್ರಕ್ಕೆ ಕೃಷ್ಣಾ ನೀರು: ವಾರದಲ್ಲಿ ನಿರ್ಧಾರ ಸಂಭವ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮಾ. 19
ಗಡಿ ಜಿಲ್ಲೆಗಳಲ್ಲಿ ತೀವ್ರ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ ಮಹಾರಾಷ್ಟ್ರ ರಾಜ್ಯದ ಕೃಷ್ಣಾ ನದಿ ಜಲಾಶಯಗಳಿಂದ 1 ಟಿಎಂಸಿಯಷ್ಟು ನೀರನ್ನು ಹರಿಸುವಂತೆ ಮಾಡಿರುವ ಮನವಿ ಹಿನ್ನೆಲೆಯಲ್ಲಿ ಚರ್ಚೆಗಳು ಸಾಗಿವೆ ಎಂದು ಹೇಳಿರುವ ಸಿಎಂ ಶೆಟ್ಟರ್ ಹಾಗೂ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ವಾರದೊಳಗೆ ಈ ವಿಷಯವನ್ನು ಸೌಹಾರ್ದಯುತ ನೆಲೆಯಲ್ಲಿ ಇತ್ಯರ್ಥಪಡಿಸಿಕೊಳ್ಳಲಾಗುತ್ತದೆ ಎಂದಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು ಆಲಮಟ್ಟಿ ಜಲಾಶಯದಿಂದ ಇಂಡಿ ಶಾಖಾ ಕಾಲುವೆ ಮೂಲಕ ಭೀಮಾ ನದಿಗೆ ನೀರು ಹರಿಸುವಂತೆ ಮಹಾರಾಷ್ಟ್ರ ಕೋರಿಕೊಂಡಿದೆ. ಈ ನೀರು ಮಹಾರಾಷ್ಟ್ರದ ಅತಿದೊಡ್ಡ ಜಿಲ್ಲೆ ಸೊಲ್ಲಾಪುರಕ್ಕೆ ಹರಿಯಲಿದೆ. ಮಹಾಮನವಿಗೆ ಪ್ರತಿಯಾಗಿ ಕರ್ನಾಟಕವೂ ಕೋಯ್ನಾ ಜಲಾಶಯದಿಂದ ಕೃಷ್ಣೆಗೆ 4 ಟಿಎಂಸಿ ಹಾಗೂ ಭೀಮೆಗೆ 2 ಟಿಎಂಸಿ (ಹಿಪ್ಪರ್ಗಿ ಜಲಾಶಯ ಮೂಲಕ) ಹರಿಸುವಂತೆ ಕೇಳಿದ್ದೇವೆ ಎಂದರು.
ಇನ್ನೊಂದು ಸುತ್ತು ಮಾತುಕತೆ: ಈಗಾಗಲೇ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವರು ಅಧಿಕಾರಿಗಳ ತಂಡದೊಂದಿಗೆ ರಾಜ್ಯಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ಹೋಗಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಜ್ಯವೂ ಅನೇಕ ಮಾಹಿತಿ ವಿನಿಮಯ ಮಾಡಿಕೊಂಡಿದ್ದು, ತನ್ನ ನೀರಿನ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದೆ. ವಾರದೊಳಗೆ ಮುಂಬೈನಲ್ಲಿ ಇನ್ನೊಂದು ಸುತ್ತು ಮಹತ್ವದ ಮಾತುಕತೆ ನಡೆಯಬೇಕಿದೆ. ಈ ಮಾತುಕತೆ ನಂತರ ಈ ವಿಷಯ ಇತ್ಯರ್ಥವಾಗಲಿದೆ ಎಂದರು.
ಭೀಮಾ ನದಿಯಲ್ಲಿಯೂ ನೀರಿಲ್ಲ, ಇದರಿಂದ ರಾಜ್ಯದ ಅನೇಕ ಗಡಿ ತಾಲೂಕುಗಳು ತೊಂದರೆಯಲ್ಲಿವೆ. ಕೋಯ್ನಾದಿಂದ ಕೃಷ್ಣೆಗೆ ನೀರು ಹರಿದು ಬಂದಲ್ಲಿ ಬೆಳಗಾವಿ ಸೇರಿದಂತೆ ಉತ್ತರದ ಅನೇಕ ಜಿಲ್ಲೆಗಳ ಬಾಯಾರಿಕೆ ಇಂಗಲಿದೆ. ಇವೆಲ್ಲ ದೃಷ್ಟಿಕೋನಗಳಿಂದಾಗಿ ರಾಜ್ಯವೂ ಮಹಾರಾಷ್ಟ್ರಕ್ಕೆ ತನಗೂ 6 ಟಿಎಂಸಿಯಷ್ಟು ನೀರು ಬೇಕೆಂಬ ಮನವಿ ಇಟ್ಟಿದೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಭೀಮಾ ಹಾಗೂ ಕೃಷ್ಣಾ ನದಿ ತೀರದಲ್ಲಿಯೂ ಪರಿಸ್ಥಿತಿ ಉಲ್ಬಣಿಸುತ್ತಿದೆ. ಈ ಬಗ್ಗೆ ಸರ್ಕಾರವೂ ಸದಾಕಾಲ ಅಲ್ಲಿನ ನೀರಿನ ಸಂಗ್ರಹ, ನದಿಗಳ ಹರಿವಿನ ವಿಚಾರವಾಗಿ ನಿಗಾ ಇಟ್ಟಿದೆ. ಮಹಾರಾಷ್ಟ್ರಕ್ಕೆ ನೀರು ಹರಿಸುವ ಮುನ್ನ ರಾಜ್ಯದ ಜನ- ಜಾನುವಾರು ನೀರಾವರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡೇ ಮುಂದಡಿ ಇಡಲಾಗುತ್ತದೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.