ಮಿತಾಕ್ಷರ ಪದ್ಧತಿ ಪುನರುತ್ಥಾನಕ್ಕೆ ಸಕಾಲ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮಾ.19
ಸ್ವಾತಂತ್ರ್ಯ ಪೂರ್ವದಲ್ಲಿ ವರ್ಷಗಳ ಕಾಲ ಇಡೀ ಭಾರತದಾದ್ಯಂತ ಏಕೈಕ ನ್ಯಾಯ ಪದ್ಧತಿಯಾಗಿದ್ದ ಮಿತಾಕ್ಷರ ಪದ್ಧತಿಯನ್ನು ಪುನರುತ್ಥಾನಗೊಳಿಸಬೇಕಾದ ಅಗತ್ಯವಿದೆ ಎಂದಿರುವದು ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಸಂಸ್ಕೃತದ ಮಿತಾಕ್ಷರ ಕನ್ನಡೀಕರಣಕ್ಕೆ ಹಣವಿದ್ದರೂ, ಆ ಕೆಲಸ ವಿಳಂಬವಾಗುತ್ತಿರುವುದನ್ನು ತೀವ್ರವಾಗಿ ಆಕ್ಷೇಪಿಸಿದರು.
ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಏರ್ಪಡಿಸಿದ್ದ ಕನ್ನಡ ಶಾಸ್ತ್ರೀಯ ಭಾಷೆ ಮತ್ತು ಅಲಕ್ಷಿತ ಸಾಹಿತ್ಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿಜ್ಞಾನೇಶ್ವರರ ಮಿತಾಕ್ಷರದಲ್ಲಿ ನ್ಯಾಯಶಾಸ್ತ್ರದ ವಿವರಣೆ ಕುರಿತು ಅವರು ಮಾತನಾಡಿದರು.
ಮಿತಾಕ್ಷರ ನ್ಯಾಯಪದ್ಧತಿ ಒಂದು ಸಮಗ್ರ ನ್ಯಾಯ ಪದ್ಧತಿಯಾಗಿದ್ದು, ಅದರಲ್ಲಿರುವ ಹಲವಾರು ಸಾರ್ವಕಾಲಿಕ ಮತ್ತು ಸರ್ವಮಾನ್ಯವಾಗಿರುವ ಅಂಶಗಳನ್ನು ಭಾರತದ ಆಧುನಿಕ ನ್ಯಾಯ ಪದ್ಧತಿಯಲ್ಲಿ ಅಳವಡಿಸಿಕೊಂಡಿದ್ದೇ ಆದಲ್ಲಿ, ದೇಶವನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ಮಿತಾಕ್ಷರ ವಿಜ್ಞಾನೇಶ್ವರ ಅಚ್ಚ ಕನ್ನಡಿಗ: ಮಿತಾಕ್ಷರ ವಿಜ್ಞಾನೇಶ್ವರ ರಚಿಸಿದ ಸಂಸ್ಕೃತ ಗ್ರಂಥವಾಗಿದ್ದರೂ, ಅದು ಒಬ್ಬ ಅಭಿಜಾತ ಕನ್ನಡಿಗನಿಂದ 11ನೇ ಶತಮಾನದಲ್ಲಿ ರಚನೆಯಾಗಿ ಭಾರತ ಉಪಖಂಡದಾದ್ಯಂತ ಪಸರಿಸಿದ್ದರಿಂದ ಕನ್ನಡದ ಸಂದರ್ಭದಲ್ಲಿ ಅದನ್ನು ಅಲಕ್ಷಿತ ಸಾಹಿತ್ಯವೆಂದೇ ಪರಿಗಣಿಸಬೇಕು ಎಂದು ಅವರು ನುಡಿದರು.
ಪ್ರಾಚೀನ ಮತ್ತು ಮಧ್ಯಯುಗೀನ ಕನ್ನಡದ ದಿಗ್ಗಜರು ಬೇರೆ ಯಾವ ಭಾಷೆಯಲ್ಲಿಯೇ ಕೃಷಿ ಮಾಡಿದ್ದರೂ, ಅದನ್ನು ಶಾಸ್ತ್ರೀಯ ಕನ್ನಡದ ತೆಕ್ಕೆಗೆ ತೆಗೆದುಕೊಂಡು ಅವುಗಳಿಗೆ ಪುನರುಜ್ಜೀವನ ಕಲ್ಪಿಸುವ ಕಾರ್ಯ ನಡೆಯಬೇಕು ಎಂದು ಅವರು ಹೇಳಿದರು.
ಮಿತಾಕ್ಷರ ವ್ಯಾಖ್ಯಾನ ಗ್ರಂಥದಲ್ಲಿ ಹೇಳಲಾಗಿರುವ ನ್ಯಾಯಾಧೀಶರ ಅರ್ಹತೆಗಳು, ವ್ಯಕ್ತಿಗಿಂತ ಸಮಾಜದ ಹಿತ ಮುಖ್ಯ ಎಂಬ ಅಂಶ, ಸ್ತ್ರೀ ಧನದ ಕಲ್ಪನೆ, ಮಹಿಳೆಯರ ವಿರುದ್ಧದ ಅಪರಾಧಗಳನ್ನು ಹೇಯ ಅಪರಾಧಗಳೆಂದು ಪರಿಗಣಿಸಿರುವುದು, ಗೋ ಹತ್ಯೆಯನ್ನು ಘೋರ ಪಾತಕ ಎಂದು ವರ್ಗೀಕರಿಸಿರುವುದು, ಕಳ್ಳತನದ ಮಾಲು ಪತ್ತೆಯಾಗದಿದ್ದಾಗ ಕಳೆದುಕೊಂಡವರಿಗೆ ಸರ್ಕಾರದ ಬೊಕ್ಕಸದಿಂದಲೇ ನೀಡಬೇಕೆಂಬ ನಿಯಮ, ನಕಲಿ ವೈದ್ಯರಿಗೆ ಕಠಿಣ ಶಿಕ್ಷೆ, ಗರ್ಭಸ್ಥ ಶಿಶುವಿಗೂ ಪಿತ್ರಾರ್ಜಿತ ಆಸ್ತಿ ಹಕ್ಕನ್ನು ದೊರಕಿಸಿಕೊಟ್ಟಿರುವುದು, ಮಕ್ಕಳಿಗೆ ದೈಹಿಕ ಶಿಕ್ಷೆ ನಿರ್ಬಂಧ, ಜೀವನ ವಿರೋಧಿಯಲ್ಲದ ಸಂಪ್ರದಾಯಗಳನ್ನಷ್ಟೇ ಮಾನ್ಯ ಮಾಡುವುದು, ಇತ್ಯಾದಿ ಅಂಶಗಳನ್ನು ಆಧುನಿಕ ನ್ಯಾಯ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಸಿರನೂರಕರಕ್ ಪ್ರತಿಪಾದಿಸಿದರು.
ಕನ್ನಡೀಕರಣಕ್ಕೆ ವಿಳಂಬ ಸಲ್ಲ: ಸ್ವಾತಂತ್ರ್ಯ ಬಂದ ಮೇಲೆ ಮಿತಾಕ್ಷರವನ್ನು ಅಲಕ್ಷಿಸಿದ್ದರಿಂದಲೇ ಭಾರತೀಯ ಸಮಾಜ ಹಲವಾರು ಕ್ಷೋಭೆ ಎದುರಿಸಬೇಕಾಯಿತು ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕೆ. ರವೀಂದ್ರನಾಥ, 'ರಾಜಾದಿತ್ಯ ಮತ್ತು ಇತರರಲ್ಲಿ ಗಣಿತಶಾಸ್ತ್ರದ ಉಲ್ಲೇಖಗಳು' ಕುರಿತು ಪ್ರಬಂಧ ಮಂಡಿಸಿದರು.
ಕವಿರಾಜಮಾರ್ಗದ ವಿವಿಧ ಮಜಲುಗಳು ಕುರಿತು ಸಹ ವಿಚಾರ ಸಂಕಿರಣದಲ್ಲಿ ಪ್ರತ್ಯೇಕ ಗೋಷ್ಠಿ ನಡೆಯಿತು. ಕೆ.ರವೀಂದ್ರನಾಥ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಪ್ರಬಂಧ ಮಂಡಿಸಿದರು.