ಪಪೂ ಕಾಲೇಜು ಆರಂಭಕ್ಕೆ ಆಗ್ರಹ
ಯಾದಗಿರಿ: ತಾಲೂಕೆಂದು ಘೋಷಣೆಯಾಗಿರುವ ವಡಗೇರಾ ವ್ಯಾಪ್ತಿಯಲ್ಲಿ 8 ಪ್ರೌಢಶಾಲೆಗಳಿದ್ದು, ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗುತ್ತಾರೆ. ಆದರೆ ಈ ಭಾಗದ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣವನ್ನು ಪಡೆಯಬೇಕಾದರೆ ದೂರದ ಯಾದಗಿರಿ ಅಥವಾ ಶಹಾಪುರಕ್ಕೆ ಹೋಗಬೇಕಾಗಿದೆ. ಆದ್ದರಿಂದ ಇಲ್ಲಿಯ ಪದವಿ ಪೂರ್ವ ಕಾಲೇಜನ್ನು ಆರಂಭಿಸಬೇಕೆಂದು ಕರವೇ ಹೋಬಳಿ ಘಟಕದ ಅಧ್ಯಕ್ಷ ಶಿವುಕುಮಾರ ಕೊಂಕಲ್ ಆಗ್ರಹಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಇಲ್ಲಿದ್ದ ಪದವಿ ಪೂರ್ವ ಕಾಲೇಜನ್ನು ಕಡಿಮೆ ದಾಖಲಾತಿಯ ನೆಪವೊಡ್ಡಿ ರದ್ದುಪಡಿಸಿ ಇಲ್ಲಿಂದ ಶಿಕ್ಷಣ ಸಚಿವರು ತಮ್ಮ ತವರು ಜಿಲ್ಲೆಗೆ ಕಾಲೇಜನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದರಿಂದಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಅವರು ದೂರಿದ್ದಾರೆ.
ರಾಜ್ಯದಲ್ಲಿ ಕಡಿಮೆ ದಾಖಲಾತಿ ಇರುವ ಎಷ್ಟೋ ಕಾಲೇಜುಗಳಿವೆ. ಅವೆಲ್ಲವನ್ನು ಹಾಗೆಯೇ ಬಿಟ್ಟು ಅತೀ ಹಿಂದುಳಿದ ಪ್ರದೇಶದಲ್ಲಿರುವ ಪದವಿ ಪೂರ್ವ ಕಾಲೇಜನ್ನು ದಾಖಲಾತಿಯ ನೆಪದಿಂದ ರದ್ದುಪಡಿಸಿದ್ದನ್ನು ನೋಡಿದರೆ ರಾಜ್ಯದ ಶಿಕ್ಷಣ ಮಂತ್ರಿಗಳು ಈ ಭಾಗಕ್ಕೆ ಮಲತಾಯಿ ಧೋರಣೆ ಹೊಂದಿದ್ದಾರೆ. ಶಿಕ್ಷಣ ಮಂತ್ರಿಗಳು ಕೇವಲ ತಮ್ಮ ತವರು ಜಿಲ್ಲೆಯಾದ ಶಿರಸಿಗೆ ಮಾತ್ರ ಮಂತ್ರಿಗಳಲ್ಲ, ಇಡೀ ರಾಜ್ಯಕ್ಕೆ ಮಂತ್ರಿ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಶೈಕ್ಷಣಿಕ ವರ್ಷದಿಂದ ವಡಗೇರಾದಲ್ಲಿ ಪದವಿ ಪೂರ್ವ ಕಾಲೇಜನ್ನು ಆರಂಭಿಸಬೇಕು ಎಂದು ಅಬ್ದುಲ್ ಚಿಗಾನೂರ, ಅಬ್ದುಲ್ ಖತಾಲಿ, ಅಜ್ಮೀರಬಾಷಾ, ರಫಿ ದೇವದುರ್ಗ ಮತ್ತಿತರರು ಇದ್ದರು.