ಮಿಣಜಗಿ ತಾಂಡಾ; ನೀರಿನ ವ್ಯವಸ್ಥೆ ಕಲ್ಪಿಸಲು ಒತ್ತಾಯ
ಗುಲ್ಬರ್ಗ: ಖಣದಾಳ ಜಿಪಂ ವ್ಯಾಪ್ತಿಯ ಮಿಣಜಗಿ ತಾಂಡಾದಲ್ಲಿ ಕೊಳವೆಬಾವಿಗಳ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿ ತಾಂಡಾದ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಕುಡಿವ ನೀರು ಸರಬರಾಜು ಯೋಜನೆ ಅಡಿಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಬೇಕು. ಓವರ್ ಟ್ಯಾಂಕಿಗೆ ಮಿಣಜಗಿ ಗ್ರಾಮದ ಹತ್ತಿರ ತೆರೆದ ಬಾವಿಯಿಂದ ಪೈಪ್‌ಲೈನ್ ಮೂಲಕ ತಾಂಡಾಕ್ಕೆ ನೀರು ಸರಬರಾಜು ಮಾಡಬೇಕೆಂದು ಪರಶುರಾಮ ರಾಠೋಡ, ತಾರಾಸಿಂಗ್ ಜಾಧವ ಹಾಗೂ ಕುಮಾರ ರಾಠೋಡ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಅಧಿಕಾರಿಗಳು ಶೀಘ್ರವೇ ಭೇಟಿ ನೀಡಿ ಕುಡಿವ ನೀರಿನ ಸಮಸ್ಯೆ ಬಗೆಹರಿಸಬೇಕು. ವಿಳಂಬ ಮಾಡಿದರೆ ಹೋರಾಟ ಮಾಡಲಾಗುವುದೆಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.