ಖಾತ್ರಿ ಕಾಮಗಾರಿಗೆ ಯಂತ್ರ ಬಳಸಿದ್ರೆ ಜೋಕೆ!
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮಾ.21
ಉದ್ಯೋಗ ಖಾತ್ರಿ ಯೋಜನೆಯಡಿ ಯಂತ್ರಗಳನ್ನು ಬಳಸಿ ಕಾಮಗಾರಿಗಳನ್ನು ಕೈಗೊಂಡಿದ್ದರೆ, ಸಂಬಂಧಪಟ್ಟ ಪಿಡಿಒ ಹಾಗೂ ಸಹಾಯಕ ಅಭಿಯಂತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಹಾಗೂ ಅವರನ್ನು ಸೇವೆಯಿಂದ ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾನವ ಶ್ರಮಕ್ಕೆ ಆದ್ಯತೆ ನೀಡುವ ಸಲುವಾಗಿ ಎಲ್ಲಿಯೂ ಯಂತ್ರಗಳ ಬಳಕೆ ಮಾಡಬಾರದೆಂದು ಮಾರ್ಗದರ್ಶಿಯಲ್ಲೆಯೇ ಸ್ಪಷ್ಟವಾಗಿ ಹೇಳಲಾಗಿದೆ. ಇದನ್ನು ಉಲ್ಲಂಘಿಸಿದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತದಿಂದ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುವುದು ಎಂದು ತಿಳಿಸಿದರು.
ಜಾಬ್ ಕಾರ್ಡ್: ಈ ಯೋಜನೆಯಡಿ ನೀಡಲಾಗುವ ಜಾಬ್ ಕಾರ್ಡ್ಗಳು ಕೂಲಿ ಕೆಲಸ ಮಾಡುವ ಉದ್ಯೋಗಿಗಳ ಬಳಿ ಇರಬೇಕು. ಸಂಬಂಧಿಸಿದವರ ಹೊರತು ಆ ಕಾರ್ಡ್ಗಳು ಮತ್ತೊಬ್ಬರು, ಏಜೆಂಟರು ಅಥವಾ ಇತರರ ಬಳಿಯಿದ್ದರೆ ಅವರ ಮೇಲೆ ದಾಳಿ ಮಾಡಿ ಜಾಬ್ ಕಾರ್ಡ್ಗಳನ್ನು ವಶಪಡಿಸಿಕೊಂಡು ಬಂಧಿಸಲಾಗುವುದು. ಇದಕ್ಕೆ ಪೊಲೀಸ್ ಇಲಾಖೆಗೆ ಅಗತ್ಯವಿರುವ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಡಿವೈಎಸ್ಪಿ ಕಾಶಿನಾಥ ಅವರಿಗೆ ಸೂಚಿಸಿದರು.
ಖಾತ್ರಿ ಯೋಜನೆಯಡಿ ಯಾವುದೇ ರೀತಿಯ ಹೆಚ್ಚುವರಿ ಕ್ರಿಯಾಯೋಜನೆಗೆ ಅನುಮೋದನೆ ನೀಡಬಾರದು. ಆದರೆ ಅಪೂರ್ಣಗೊಂಡ ಕಾಮಗಾರಿಗಳನ್ನು ಮಾಡಿ ಮುಗಿಸಬಹುದಾಗಿದೆ. ಕೂಲಿ ಕೆಲಸ ಮಾಡಿದವರಿಗೆ 15 ದಿನಗಳೊಳಗೆ ಅವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಬೇಕು. ಮುಖ್ಯವಾಗಿ ಕೂಲಿಕಾರರಿಗೆ ಅವರ ಬ್ಯಾಂಕ್ ಖಾತೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿಯೇ ಇರಬೇಕೆಂದು ಅವರು ಸೂಚನೆ ನೀಡಿದರು.
15 ದಿನಕ್ಕೊಮ್ಮೆ ಸಭೆ: ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡ ಕಾಮಗಾರಿಗಳ ಸಾಧಕ-ಬಾಧಕಗಳನ್ನು ಪರಿಶೀಲಿಸಲು 15 ದಿನಗಳಿಗೊಮ್ಮೆ ಸಂಬಂಧಿಸಿದ ಅಧಿಕಾರಿಗಳ ಹಾಗೂ ಸಿಬ್ಬಂದಿ ಸಭೆ ಕರೆಯಲಾಗುವುದು, ಈ ಯೋಜನೆಯಡಿ ಹೂಳು ತೆಗೆಯುವ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಆ ಮೂಲಕ ಕುಡಿವ ನೀರಿನ ಮೂಲಗಳನ್ನು ಸಂರಕ್ಷಿಸಿಕೊಳ್ಳಬೇಕು. ಯಾವುದೇ ಕಾಮಗಾರಿ ನಿರ್ವಹಿಸುವಾಗ 50ಕ್ಕಿಂತಲೂ ಹೆಚ್ಚಿನ ಮಂದಿ ಕೂಲಿ ಕಾರ್ಮಿಕರಿದ್ದಲ್ಲಿ ಆ ಸ್ಥಳದಲ್ಲಿ ಕುಡಿವ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಬೇಕು. ಇದೇ ಏ.1ರಿಂದ ಖಾತ್ರಿ ಯೋಜನೆಯಡಿ ನೀಡಲಾಗುವ ಕೂಲಿಯ ಹಣವನ್ನು 174ಕ್ಕೆ ಹೆಚ್ಚಿಸಲಾಗುತ್ತಿದೆ. ಕೆಲವೆಡೆ ಈ ಹಣಕ್ಕಿಂತಲೂ ಅರ್ಧದಷ್ಟು ಕೂಲಿಯನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಹೆಚ್ಚು ಉದ್ಯೋಗ ನೀಡಿ: ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಜನ ಉದ್ಯೋಗ ಅರಸಿ ಬೇರೆ ಪ್ರದೇಶಗಳಿಗೆ ಗುಳೆ ಹೋಗುತ್ತಾರೆ. ಉದ್ಯೋಗ ಸೃಷ್ಟಿ ಹಾಗೂ ಕೂಲಿಕಾರರಿಗೆ ಉದ್ಯೋಗ ನೀಡಲೆಂದೇ ಜಾರಿಗೆ ತರಲಾದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮೇಲ್ಕಂಡ ತಿಂಗಳಲ್ಲಿಯೇ ಹೆಚ್ಚಿನ ಉದ್ಯೋಗ ನೀಡಿ, ಉದ್ಯೋಗಕ್ಕಾಗಿ ಜನ ಬೇರೆಡೆಗೆ ಗುಳೆ ಹೋಗುವುದನ್ನು ತಪ್ಪಿಸಬೇಕು. ಆದರೂ ಜನ ಗುಳೆ ಹೋದರೆ, ಸಂಬಂಧಪಟ್ಟ ತಾಪಂ ಇಒಗಳು, ಪಿಡಿಒಗಳು ಹಾಗೂ ಎಂಜಿನಿಯರುಗಳೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಿಡಿಒಗಳು ಕೆಲಸಕ್ಕಾಗಿ ಗುಳೆ ಹೋಗುವವರ ಮಾಹಿತಿ ಸಂಗ್ರಹಿಸಬೇಕು, ಕೂಲಿ ಹಣವನ್ನು 174ಕ್ಕೆ ಹೆಚ್ಚಿಸಿರುವ ಬಗ್ಗೆ ವ್ಯಾಪಕವಾಗಿ ಪ್ರಚಾರ ಕಾರ್ಯ ಕೈಗೊಳ್ಳಬೇಕೆಂದು ಅವರು ನಿರ್ದೇಶನ ನೀಡಿದರು.
ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ: ಜಿಲ್ಲೆಯ 317 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಬಹುದೆಂದು ಅಂದಾಜಿಸಲಾಗಿದ್ದು, ಅಲ್ಲಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸಲಾಗುತ್ತಿದೆ. ಆಳಂದ ತಾಲೂಕಿನ ಆಳಂದ ಹಾಗೂ ಸರಸಂಭಗಳಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಅಲ್ಲದೇ ಪ್ರತಿ ತಾಲೂಕಿಗೆ ಕುಡಿವ ನೀರನ್ನು ಒದಗಿಸಲು 30 ಲಕ್ಷ ಹಣವನ್ನು ನೀಡಲಾಗಿದೆ.
ಟಾಸ್ಕ್ಫೋರ್ಸ್ನಲ್ಲಿ 60 ಲಕ್ಷ ಒದಗಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ಕುಡಿವ ನೀರನ ಸಮಸ್ಯೆ ಬಗೆಹರಿಸಲು 16 ಕೋಟಿ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅದಕ್ಕೆ ಸರ್ಕಾರ ಸಮ್ಮತಿಸಿದೆ. ಕೆಲವೆಡೆ ತಾಂತ್ರಿಕ ಕಾರಣಗಳಿಂದಾಗಿ ಬೋರ್ವೆಲ್ನಿಂದ ನೀರು ಸರಬರಾಜಾಗುತ್ತಿಲ್ಲ. ಸಣ್ಣಪುಟ್ಟ ದೋಷಗಳನ್ನು ನಿವಾರಿಸಿದಲ್ಲಿ ನೀರು ಸರಬರಾಜಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚಿಂಚೋಳಿ ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಕಂಡುಬರುವ 9 ತಾಂಡಾಗಳನ್ನು ಗುರುತಿಸಲಾಗಿದೆ. ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಪಲ್ಲವಿ ಆಕುರಾತಿ ತಿಳಿಸಿದರು.