ಸಿಮೆಂಟ್ ಕಾರ್ಖಾನೆ ನಿರ್ಮಾಣಕ್ಕೆ ಭೂ ಸ್ವಾಧೀನ ಹೆಚ್ಚಿನ ಬೆಲೆ ನಿಗದಿಗೆ ಒತ್ತಾಯ
ಕನ್ನಡಪ್ರಭ ವಾರ್ತೆ ಚಿತ್ತಾಪುರ ಮಾ.21
ತಾಲೂಕಿನ ಇಟಗಾ ಬಳಿ ಓರಿಯಂಟಲ್ ಸಿಮೆಂಟ್ ಕಾರ್ಖಾನೆಯವರು ಇಲ್ಲಿನ ಪ್ರತಿ ಎಕರೆ ಜಮೀನಿಗೆ 45 ಲಕ್ಷ ನೀಡಿ ರೈತರಿಂದ ಖರೀದಿ ಮಾಡಬೇಕೆಂದು ಒತ್ತಾಯಿಸಿ ಕಾರ್ಖಾನೆ ನಿರ್ಮಾಣವಾಗುತ್ತಿರುವ ಗೇಟ್ ಬಳಿ ಗುರುವಾರ ವಿವಿಧ ಸಂಘಟನೆಳ ನೇತೃತ್ವದಲ್ಲಿ ರೈತರು ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ ಹಾಗೂ ದಿಗ್ಗಾಂವದ ಮಲ್ಲಯ್ಯ ಸ್ವಾಮಿ ಸ್ಥಾವರಮಠ ಅವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿ, ಹೋರಾಟಕ್ಕೆ ಬೆಂಬಲಿಸುವುದಾಗಿ ಹೇಳಿದರು.
ಇಟಗಾ, ಮೋಗಲಾ, ದಿಗ್ಗಾಂವ ರೈತ ಪರ ಹೋರಾಟ ಸಮಿತಿ ಅಧ್ಯಕ್ಷ ಪ್ರಭಾಕರ್ ವಾಲಿಕಾರ, ಸಿದ್ದಣ್ಣಗೌಡ ಪಾಟೀಲ್, ತಮ್ಮಣ್ಣ ಡಿಗ್ಗಿ, ರಾಜ್ಯ ಜೆಡಿಎಸ್ ಕಾರ್ಮಿಕ ಸಮಿತಿ ಹಿರಿಯ ಉಪಾಧ್ಯಕ್ಷ ಮಹ್ಮದ್ ಮೈನೊದ್ದೀನ್ ಮುನ್ಸಿಬ್ದಾರ ಹೋರಾಟದ ನೇತೃತ್ವ ವಹಿಸಿದ್ದಾರೆ.
ಮನವಿಗೆ ಸ್ಪಂದಿಸಿಲ್ಲ: ಸಿಮೆಂಟ್ ಕಾರ್ಖಾನೆ ನಿರ್ಮಾಣಕ್ಕೆ ತಾಲೂಕಿನ ಇಟಗಾ, ಮೋಗಲಾ, ದಿಗ್ಗಾಂವ ಗ್ರಾಮಗಳ ಜಮೀನು ಪಡೆಯಲಾಗುತ್ತಿದೆ. ಆದರೆ ರೈತರ ಜಮೀನುಗಳಿಗೆ ಉತ್ತಮ ಬೆಲೆ ಹಾಗೂ ಪರಿಹಾರ ನೀಡುವಂತೆ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತದವರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಗುಲ್ಬರ್ಗದಲ್ಲಿ ಪ್ರತಿ ಎಕರೆಗೆ 22 ಲಕ್ಷ, ಯಾದಗಿರಿಯಲ್ಲಿ 14 ಲಕ್ಷ, ಕೊಪ್ಪಳದಲ್ಲಿ 20 ಲಕ್ಷ, ಗದಗನಲ್ಲಿ 25 ಲಕ್ಷ, ಕೋಲಾರದಲ್ಲಿ 35 ಲಕ್ಷ ನೀಡಲಾಗುತ್ತಿದೆ. ಆದರೆ ಇಲ್ಲಿ ಸರಿಸಮನಾದ ಉತ್ತಮ ಬೆಲೆ ಹಾಗೂ ಪರಿಹಾರ ರೈತರಿಗೆ ಸಿಮೆಂಟ್ ಕಂಪನಿಯವರು ನೀಡುತ್ತಿಲ್ಲ ಎಂದು ಆರೋಪಿಸಿದರು.
ಬೇಡಿಕೆಗಳು: ಕೈಗಾರಿಕೆಗೆ ರೈತರು ಜಮೀನು ನೀಡುವ ಮೂಲಕ ಆರ್ಥಿಕ ಸ್ಥಿತಿ ಕ್ಷೀಣಿಸುವ ಸಾಧ್ಯತೆಯಿದೆ. ಕೂಡಲೇ ರೈತರ ಹಿತದೃಷ್ಟಿಯಿಂದ ಉತ್ತಮ ಬೆಲೆ, ಪರಿಹಾರ ನೀಡಬೇಕು. ಸಂಬಂಧಪಟ್ಟ ಗ್ರಾಪಂ ಅಭಿವೃದ್ಧಿಗೆ 1 ಕೋಟಿ ಹಾಗೂ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಕುಡಿವ ನೀರು, ಸ್ವಚ್ಛತೆ ಹಾಗೂ ಪ್ರತಿ ಕುಟುಂಬಕ್ಕೆ ಕಾಯಂ ಉದ್ಯೋಗ ವ್ಯವಸ್ಥೆ ಕಲ್ಪಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಸರದಿ ಉಪವಾಸ ಸತ್ಯಾಗ್ರಹ ಅರಂಭಿಸಿದರು. ಅಧಿಕಾರಿಗಳು ಹಾಗೂ ಕಂಪನಿ ಆಡಳಿತ ಮಂಡಳಿಯವರು ನಿರ್ಲಕ್ಷ್ಯ ವಹಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಉಪವಾಸ ಸತ್ಯಾಗ್ರಹದಲ್ಲಿ ಸಾಬಣ್ಣ ಕುಂಬಾರ, ಪುಂಡಲಿಕ, ನಾಗಣ್ಣ ಡಿಗ್ಗಿ, ಮಹಾದೇವ ಡಿಗ್ಗಿ, ನಾಗಪ್ಪ ಸೇಡಂ, ರಾಜು ವಾಲಿಕಾರ, ನಾಗಣ್ಣ ತಳವಾರ, ಮಲ್ಲೇಶಿ ಬಡಿಗೇರ, ಶರಣು ತೋನಸನಹಳ್ಳಿ, ಶಿವರಾಯ ಡಿಗ್ಗಿ, ನಾಗೇಂದ್ರ ಡಿಗ್ಗಿ, ತಿಪ್ಪಣ್ಣ ದಳಪತಿ, ಮಲ್ಲಪ್ಪ ತಳವಾರ, ಸಾಬಣ್ಣ ಮಳಖೇಡಕರ್, ನಾಗೇಶ ಹೂಡಾ, ಸಲಿಂ ಪಟೇಲ್, ಅಬ್ದುಲ್ ಸಲಿಂ ತಂಬಾಕವಾಲೆ, ಅಫ್ಜಲ್ ಖುರೇಶಿ ಹಾಗೂ ಮಹಿಳೆಯರು ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.