1 ಲಕ್ಷ ವೆಚ್ಚದ ಟ್ಯಾಂಕ್ ನಿರುಪಯುಕ್ತ
ಕಮಲನಗರ: ಬೇಸಿಗೆಯ ಬಿರು ಬಿಸಿಲು ಆರಂಭವಾಗಿದೆ. ಇದೇ ಪ್ರಮಾಣದಲ್ಲಿ ಕುಡಿಯುವ ನೀರಿಗಾಗಿನ ಬವಣೆ ಮಿತಿಮೀರುತ್ತ ಸಾಗಿದೆ. ಅಂಥದರಲ್ಲಿ ಕಮಲನಗರದ ಸರ್ಕಾರಿ ಕನ್ಯಾ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಮಾರು 1 ಲಕ್ಷ ವೆಚ್ಚದಲ್ಲಿ ಕಟ್ಟಿರುವ ನೀರಿನ ಟ್ಯಾಂಕ್ ನೀರಿಲ್ಲದೆ ಯೋಜನೆ ನಿರುಪಯುಕ್ತವಾಗಿದೆ.
2011-12ರಲ್ಲಿ ತಾಲೂಕು ಪಂಚಾಯತ್‌ನಿಂದ ರು. 97 ಸಾವಿರ ಅನುದಾನದ ಕಿರು ನೀರು ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಟ್ಯಾಂಕ್‌ಗೆ ಪೈಪ್‌ಲೈನ್ ಜೋಡಣೆಯ ನಿರ್ಲಕ್ಷ್ಯದಿಂದಾಗಿ ಯೋಜನೆ ನೆನಗುದಿಗೆ ಬಿದ್ದಿದೆ.
ಶಾಲಾ ಮಕ್ಕಳ ಅನುಕೂಲಕ್ಕಾಗಿ ನಿರ್ಮಿಸಲಾದ ಈ ಟ್ಯಾಂಕ್ ಅನುಪಯುಕ್ತವಾದ ಹಿನ್ನೆಲೆಯಲ್ಲಿ ಊಟದ ನಂತರ ಮಕ್ಕಳು ಬಹು ದೂರ ಸಾಗಿ ಬಾಯಾರಿಕೆ ನೀಗಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಈಗಲಾದರೂ ಸಂಬಂಧಿತರು ನೀರಿನ ಬವಣೆಗೆ ಬ್ರೇಕ್ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಮಕ್ಕಳ ಪಾಲಕರು ಆಗ್ರಹಿಸಿದ್ದಾರೆ.
ಮಂಗಲಪೇಟ್: ನಾಳೆ ಕ್ರೈಸ್ತರ ಒಕ್ಕೂಟದ ಸಭೆ
ಬೀದರ್: ನಗರದ ಮಂಗಲಪೇಟ್‌ನಲ್ಲಿರುವ ಹಳೇ ಮೆಥೋಡಿಸ್ಟ್ ಚರ್ಚ್ ಆವರಣದಲ್ಲಿ ಕ್ರೈಸ್ತ ಸಮಾಜದ ಹಿರಿಯರ ಸಭೆ ಶಿರೋಮಣಿ ಶ್ರೀಮಂಡಲ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ಸಮಾಜ ಸೇವಕ ಎಂಎಸ್ ಶಿರೋಮಣಿ ತಿಳಿಸಿದ್ದಾರೆ. ಅಂದು ಸಂಜೆ 4 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಪ್ರಸಕ್ತ ರಾಜಕೀಯ ವ್ಯವಸ್ಥೆ ಕುರಿತು, ಕ್ರೈಸ್ತರ ಹಕ್ಕು ಮತ್ತು ಬಾಧ್ಯತೆ, ಕ್ರೈಸ್ತರ ರಾಜಕೀಯ, ಆರ್ಥಿಕ, ಸಾಮಾಜಿಕ ವ್ಯವಸ್ಥೆ ಕುರಿತು ಜಾಗೃತಿ ಮೂಡಿಸುವ ತೀರ್ಮಾಕ್ಕೆ ಎಲ್ಲರೂ ಬದ್ದರಾಗಿದ್ದಾರೆ. ಅಂದು ನಡೆಯುವ ಸಭೆಗೆ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದ್ದಾರೆ.