ಕಾಳಸಂತೇಲಿ ಪಡಿತರ ಮಾರಾಟ
ಯಾದಗಿರಿ: ಬಡವರಿಗೆ ರಿಯಾಯತಿ ದರದಲ್ಲಿ ವಿತರಿಸಲು ಬಂದಿದ್ದ ಪಡಿತರ ಸಾಮಗ್ರಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ವೇಳೆ ಸಾರ್ವಜನಿಕರೇ ತಡೆದು ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ ಘಟನೆ ತಾಲೂಕಿನ ಮುಂಡರಗಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ತಾಲೂಕಿನ ಮುಂಡರಗಿ ಗ್ರಾಮದ ಪಡಿತರ ಅಂಗಡಿ ಮಾಲೀಕ ಶುಕ್ರವಾರ ಅಕ್ರಮವಾಗಿ ಆಹಾರ ಧಾನ್ಯ ಸಾಗಿಸುತ್ತಿದ್ದಾಗ ಸಾರ್ವಜನಿಕರ ಕೈಗೆ ಸಿಕ್ಕು ಬಿದ್ದಿದ್ದಾರೆ. ಸಾರ್ವಜನಿಕರಿಗೆ ಹಂಚಬೇಕಿದ್ದ ಅಕ್ಕಿ, ಗೋಧಿ ಹಾಗೂ ಸಕ್ಕರೆ ಅಕ್ರಮ ಮಾರಾಟವಾಗುತ್ತಿದ್ದ ಪ್ರಕರಣ ಇದರಿಂದ ಬಹಿರಂಗವಾಗಿದೆ.
ಜಿಲ್ಲಾ ಕೇಂದ್ರದಿಂದ ಕೇವಲ 5 ಕಿಮೀ ದೂರದಲ್ಲಿರುವ ಮುಂಡರಗಿ ಗ್ರಾಮದ ಪಡಿತರ ಅಂಗಡಿ ಮಾಲೀಕ ಶಂಕರ್ ಎಂಬವರು ಶುಕ್ರವಾರ ಟಂಟಂ ಒಂದರಲ್ಲಿ ಸುಮಾರು 10 ಮೂಟೆಯಲ್ಲಿ ಅಕ್ಕಿ ಹಾಗೂ ಗೋಧಿಯನ್ನು ಸಾಗಾಟ ಮಾಡುತ್ತಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಹಿಡಿದು ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.
ಕಾಳಸಂತೆಯಲ್ಲಿ ಮಾರಾಟ: ಗ್ರಾಮದ ಮಲ್ಲಿಕಾರ್ಜು, ದೇವೇಂದ್ರಪ್ಪ ಇತರರು ಈ ಕುರಿತು ಮಾತನಾಡಿ, ಕಳೆದ ವರ್ಷ ಪಡಿತರ ದಾಸ್ತಾನು ಹಂಚಲು ಪರವಾನಗಿ ಪಡೆದಿದ್ದ ಶಂಕರ್ ಮುಂಡರಗಿ ಹಾಗೂ ಮುಂಡರಗಿ ತಾಂಡಾದ ಒಟ್ಟು 800 ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ಸರಿಯಾಗಿ ಅಕ್ಕಿ, ಗೋಧಿ ಹಾಗೂ ಸಕ್ಕರೆ ವಿತರಣೆ ಮಾಡಬೇಕು.
ಆದರೆ ಅವರು ಅದನ್ನು ಸಾರ್ವಜನಿಕರಿಗೆ ಹಂಚದೇ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಪರವಾನಗಿ ರದ್ದುಪಡಿಸಿ: ಟಂಟಂ ಹಿಡಿದು ನಿಲ್ಲಿಸಿದ ಗ್ರಾಮಸ್ಥರು ಸಂಬಂಧಪಟ್ಟ ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಟಂಟಂನಲ್ಲಿ ಸಾಗಿಸಲಾಗುತ್ತಿದ್ದ 10 ಚೀಲ ಅಕ್ಕಿ ಹಾಗೂ 2 ಚೀಲ ಗೋಧಿಯನ್ನು ವಶಪಡಿಸಿಕೊಂಡಿದ್ದಾರೆ. ಅಂಗಡಿ ಮಾಲೀಕನ ಪರವಾನಗಿ ರದ್ದು ಮಾಡುವುದಾಗಿ ಇಲಾಖೆ ಶಿರಸ್ತೇದಾರ ಅಮರಣ್ಣ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
ಆದರೆ ಇದರಿಂದ ತೃಪ್ತರಾಗದ ಗ್ರಾಮಸ್ಥರು, ರೆಡ್ಹ್ಯಾಂಡಾಗಿ ಪಡಿತರ ಸಾಮಗ್ರಿಯನ್ನು ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದರೂ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಇದರಿಂದ ಹಲವು ಸಂಶಯ ವ್ಯಕ್ತವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.