ನೀರು ಜೀವಾಮೃತ, ಮಿತವಾಗಿ ಬಳಸಿ: ಕುಲ್ಕರ್ಣಿ
ಶಹಾಪುರ: ನೀರು ಪ್ರತಿಯೊಂದು ಜೀವಕ್ಕೂ ಅಮೃತವಿದ್ದಂತೆ. ನೀರಿನ ಅಂಶ ಇರದೇ ಭೂಮಂಡಲದ ಮೇಲೆ ಯಾವುದೇ ಜೀವರಾಶಿಗಳು ಬದುಕಲು ಸಾಧ್ಯವಿಲ್ಲ. ಅದಕ್ಕಾಗಿ ನೀರನ್ನು ಪ್ರತಿಯೊಬ್ಬರು ಮಿತವಾಗಿ ಬಳಸಿದಾಗ ಮಾತ್ರ ಅದನ್ನು ಉಳಿಸಿದಂತಾಗುತ್ತದೆ ಎಂದು ಗುಲ್ಬರ್ಗದ ನೀರು ಸಂರಕ್ಷಣಾಧಿಕಾರಿ ಎಚ್.ಎಂ. ಕುಲ್ಕರ್ಣಿ ಹೇಳಿದರು.
ಇಲ್ಲಿಯ ಭೀಮರಾಯನಗುಡಿಯಲ್ಲಿ ಸಂಘಮಿತ್ರ ಗ್ರಾಮೀಣ ಹಣಕಾಸು ಸೇವಾ ಸಂಸ್ಥೆ ಹಾಗೂ ಆಶಾಕಿರಣ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಜರುಗಿದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಮಹಾವಿದ್ಯಾಲಯದ ತಜ್ಞ ಡಾ. ಎಂ.ಬಿ. ಅಗ್ನಾಳ ಮಾತನಾಡಿ, ನೀರು, ಗಾಳಿ, ಆಹಾರ ಇವು ನೈಸರ್ಗಿಕ ಸಂಪತ್ತಾಗಿವೆ. ಇವನ್ನು ಮಿತವಾಗಿ ಬಳಸಬೇಕು. ಜತೆಗೆ ಅವು ಶುದ್ಧವಾಗಿರುವಂತೆ ನೋಡಿಕೊಳ್ಳಬೇಕೆಂದು ಹೇಳಿದರು. ಮಲ್ಲಿಕಾರ್ಜುನ ಹೊನ್ನಾಳೆ, ಶಿವಯೋಗಪ್ಪ ಇದ್ದರು. ಸಂಸ್ಥೆಯ ಅಧ್ಯಕ್ಷ ಸಂಗೀತಾರಡ್ಡಿ ಅಧ್ಯಕ್ಷತೆ ವಹಿಸಿದ್ದರು. ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು. ಅಂಜಲಿ ಸ್ವಾಗತಿಸಿದರು. ಅನ್ನಪೂರ್ಣ ವಂದಿಸಿದರು.