ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ: ಸಂದೇನಕರ್
ಯಾದಗಿರಿ: ಮಕ್ಕಳಲ್ಲಿ ಅದ್ಭುತವಾದ ಪ್ರತಿಭೆ ಅಡಕವಾಗಿರುತ್ತದೆ. ಪ್ರತಿಭೆ ಹೊರಹಾಕಲು ಸೂಕ್ತ ವೇದಿಕೆ ನೀಡಲು ಶಿಕ್ಷಕರು ಹಾಗೂ ಪಾಲಕರು ಅವಕಾಶ ಕಲ್ಪಿಸಬೇಕು. ಮಕ್ಕಳಿಗೆ ಪ್ರೋತ್ಸಾಹ ನೀಡುವುದರಿಂದ ಅವರಲ್ಲಿ ಸುಪ್ತವಾಗಿರುವ ಪ್ರತಿಭೆ ಬೆಳೆಯುತ್ತದೆ ಎಂದು ಶಿಕ್ಷಣ ಸಂಯೋಜಕ ಜ್ಞಾನೇಶ್ವರ ಸಂದೇನಕರ್ ಹೇಳಿದರು.
ಗುರುಮಠಕಲ್ ಖಾಸಾಮಠದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಕು. ಬಾಂಧ್ಯವೆಗೆ ಸನ್ಮಾನಿಸಿ ಮಾತನಾಡಿದರು. ಪ್ರತಿಭೆಗಳು ಅರಮನೆಯಲ್ಲಿ ಹುಟ್ಟುವುದಿಲ್ಲ, ಗುಡಿಸಲುಗಳಲ್ಲಿ ಹುಟ್ಟುತ್ತವೆ. ಗ್ರಾಮೀಣ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದವರೆಗೂ ಬೆಳೆಯಲು ಪ್ರೋತ್ಸಾಹ ನೀಡಬೇಕೆಂದು ಹೇಳಿದರು.
ತಾಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷ ವಿಶ್ವನಾಥ ಕರ್ಲಿ ಮಾತನಾಡಿ, ಪ್ರಯೋಗ ಪ್ರತಿಷ್ಠಾನ ಗುರುಮಠಕಲ್ ವತಿಯಿಂದ 2ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಬಾಲ ಪ್ರತಿಭೆ ಬಾಂಧ್ಯವೆಗೆ ಸನ್ಮಾನ ಮಾಡುವುದು ಸಂತೋಷಕರ ವಿಷಯ ಎಂದರು.