ಚಾಕುವಿನಿಂದ ಇರಿದು ಕೊಲೆ
ಕನ್ನಡಪ್ರಭ ವಾರ್ತೆಗುಲ್ಬರ್ಗಮಾ.23
ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ ಸಲಾಂ ಟೇಕಡಿ ಹತ್ತಿರ ನಡೆದಿದೆ.
ನಗರದ ಖಮರ್ ಕಾಲೋನಿಯ ನಿವಾಸಿ ಫಿರ್ದೋಷ (20) ಕೊಲೆಯಾದ ಯುವಕ. ಸಲಾಂ ಟೇಕಡಿ ಹತ್ತಿರದ ಹೊಲದಲ್ಲಿ ಶನಿವಾರ ಶವ ಪತ್ತೆಯಾಗಿದ್ದು, ಕೊಲೆಗಾರರು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಕೊಲೆಯಾದ ಯುವಕ ಹೊಡೆದಾಟದ ಪ್ರಕರಣಮೊಂದರಲ್ಲಿ ಆರೋಪಿಯಾಗಿದ್ದನೆಂದು ತಿಳಿದುಬಂದಿದೆ.
ಕೊಲೆಯಾದ ಯುವಕನ ಬಳಿ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದಂಡ ಕಟ್ಟಿದ ರಸೀದಿಯೊಂದು ದೊರೆತಿದ್ದು, ಈ ರಸೀದಿಯ ಆಧಾರದ ಮೇಲೆ ಯುವಕನ ಹೆಸರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸುದ್ದಿ ತಿಳಿದು ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸತೀಶ, ಪಿಎಸ್ಐ ಆನಂದರಾವ ಹಾಗೂ ಸಿಬ್ಬಂದಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.