ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರಚಾರಕ್ಕಿಳಿದ ಗುರುನಾಥ

Mainashree
Updated On : 24 Mar 2013, 11:15 am

ಗುಲ್ಬರ್ಗ/ಶಹಾಬಾದ್: ಚಿತ್ತಾಪುರ ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ಸಿ. ಗುರುನಾಥ ಶುಕ್ರವಾರ ಭಂಕೂರ, ಶಾಂತನಗರ, ಮುಗುಳನಾಗಾವ ಗ್ರಾಮಗಳಲ್ಲಿ ತಮ್ಮ ಚುನಾವಣಾ ಪ್ರಚಾರ ಪ್ರಾರಂಭಿಸಿದರು.
ಭಂಕೂರ ಗ್ರಾಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಆಗಮಿಸಿದ ಅವರು ಪ್ರಸಿದ್ಧ ಹನ್ನೆರಡು ಅಡಿ ಸ್ವಯಂಭೂ ಗಣಪತಿ, ಗ್ರಾಮದೇವತೆ ಕೆರೆಯಮ್ಮ ದೇವಿ, ದರ್ಗಾಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ನಂತರ ಗ್ರಾಮದಲ್ಲಿಯ ಡಾ.ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ, ಗ್ರಾಮದಲ್ಲಿ ಪ್ರಮುಖರನ್ನು ಭೇಟಿ ಮಾಡಿ, ಸಾರ್ವಜನಿಕರಲ್ಲಿ ತಮ್ಮ ಪ್ರಚಾರ ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮತದಾರರಿಗೆ ಇಂದು ಕುಟುಂಬ ರಾಜಕಾರಣದ ಬಗ್ಗೆ ಮೌಲ್ಯಮಾಪನ ಮಾಡಬೇಕಾಗಿದೆ, ಜನ ಇಂದು ತಮ್ಮ ಮತಗಳ ಮೂಲಕ ವಂಶ ರಾಜಕಾರಣಕ್ಕೆ ತಿಲಾಂಜಲಿ ನೀಡಬೇಕಾಗಿದ್ದು, ಅಂಥ ವಂಶ ರಾಜಕಾರಣದ ವಿರುದ್ಧ ತಮ್ಮ ಸ್ಪಷ್ಟ ಸಂದೇಶ ಹೇಳುವ ಕಾಲ ಬಂದಿದೆ ಎಂದು ಪರೋಕ್ಷವಾಗಿ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಅವಧಿಯಲ್ಲಿ ಅನೇಕ ಜನಪರ, ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿದ್ದು, ರಾಜಕೀಯ ಕುತಂತ್ರದಿಂದ ತಮ್ಮ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಬಿಎಸ್‌ವೈಯವರು ಕೇವಲ ಮಠ, ಮಂದಿರಗಳಿಗೆ ಮಾತ್ರ ಹಣ ನೀಡಿದ್ದಾರೆ ಎಂಬ ಕಾಂಗ್ರೆಸ್ ಪಕ್ಷದ ಆರೋಪವನ್ನು ಖಂಡಿಸಿದ ಅವರು, ಸಮಾಜದ ಎಲ್ಲಾ ವರ್ಗದವರಿಗೆ ಸಮಾಜ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆಂದು ಹೇಳಿದರು.
ಅಲ್ಪಸಂಖ್ಯಾತರ ಹಿತೈಷಿ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ಹಿಂದೆ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಅವರ ಅವಧಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೇವಲ 44 ಕೋಟಿ ಮೀಸಲಿಟ್ಟಿದ್ದರು. ಆದರೆ ಬಿಎಸ್‌ವೈ ತಮ್ಮ ಅವಧಿಯಲ್ಲಿ 240 ಕೋಟಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮೀಸಲಿಟ್ಟಿದ್ದು, ಇದರಿಂದ ಅಲ್ಪಸಂಖ್ಯಾತರ ಹಿತೈಷಿ ಯಾರು ಎಂಬುವುದು ನಿರ್ಧಾರವಾಗುತ್ತದೆ ಎಂದರು.
ಬಿಎಸ್‌ವೈ ಕೇವಲ ಮಠ, ಮಂದಿರಗಳಿಗೆ ಹಣ ನೀಡಿದ್ದಾರೆಂದು ಆರೋಪಿಸುತ್ತಿರುವ ಖರ್ಗೆ ತಾವೇ ನಿರ್ಮಿಸಿದ್ದು ಎಂದು ಹೇಳುತ್ತಿರುವ ಗುಲ್ಬರ್ಗ ಬುದ್ಧ ವಿಹಾರಕ್ಕೆ ಬಿಎಸ್‌ವೈ ಹಣ ನೀಡಿದ್ದನ್ನು ಏಕೆ ಹೇಳುವುದಿಲ್ಲ ಎಂದು ಪ್ರಶ್ನಿಸಿದ ಅವರು, ಇದು ಅಭಿವೃದ್ಧಿಯಲ್ಲಿ ರಾಜಕೀಯ ಹುಡುಕುವ ವಿಚಾರ ಎಂದು ಖಾರವಾಗಿ ಹೇಳಿದರು.
ಕೆಜೆಪಿ ಅಧ್ಯಕ್ಷ ಬಸವರಾಜಗೌಡ ತರನಳ್ಳಿ, ಶಿವುಗೌಡ, ಅಬ್ದುಲ್ ರಬ್ ಬಾರಿ, ರಾಚಣ್ಣ ಅಲ್ಲಮಶೆಟ್ಟಿ, ಶರಬಣ್ಣ ಪಟ್ಟೇದಾರ, ರವಿ ಮೇಸ್ತ್ರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement