ಮರಳು ಸಾಗಣೆ ತಡೆಗೆ ಕರವೇ ಒತ್ತಾಯ
ಕನ್ನಡಪ್ರಭ ವಾರ್ತೆಚಿತ್ತಾಪುರಮಾ.23
ತಾಲೂಕಿನ ದಂಡೋತಿ ಗ್ರಾಮಕ್ಕೆ ಹೊಂದಿಕೊಂಡಿರುವ ಕಾಗಿಣಾ ನದಿಯಲ್ಲಿ ಹಲವಾರು ದಿನಗಳಿಂದ ಅಕ್ರಮವಾಗಿ ಮರಳು ಸಾಗಣಿಕ ನಡೆಯುತ್ತಿದ್ದು, ಇದನ್ನು ಕೂಡಲೇ ತಡೆದು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರವೇ(ನಾರಾಯಣಗೌಡ ಬಣ) ಗ್ರಾಮ ಘಟಕ ಅಧ್ಯಕ್ಷ ಸಾಬಣ್ಣ ಭರಾಟಿ ಒತ್ತಾಯಿಸಿದ್ದಾರೆ.
ತಾಲೂಕಿನ ಹಲವಾರು ಗ್ರಾಮಗಳಿಗೆ ಕುಡಿವ ನೀರಿನ ಜೀವನದಿಯಾಗಿರುವ ಕಾಗಿಣಾ ನದಿಯಲ್ಲಿ ಹಲವಾರು ದಿನಗಳಿಂದ ಹಗಲು ರಾತ್ರಿಯನ್ನದೇ ಅಕ್ರಮವಾಗಿ ಜೆಸಿಬಿ ಮುಖಾಂತರ ರಾಜಾರೋಷವಾಗಿ ಲಾರಿ, ಟ್ರ್ಯಾಕ್ಟರ್ ಮೂಲಕ ಮರಳು ಸಾಗಣೆ ಮಾಡುತ್ತಿರುವುದರಿಂದ ನದಿಯಲ್ಲಿ ಬೃಹತ್ ತಗ್ಗುಗಳಾಗಿ ಅದರಲ್ಲಿ ಅನೇಕ ಪ್ರಾಣಿಗಳು ಬಿದ್ದು ಅನಾಹುತ ಸಂಬವಿಸುತ್ತಿವೆ. ಅಲ್ಲದೇ ನದಿಯಲ್ಲಿ ಮರಳು ಖಾಲಿಯಾಗಿರುವುದರಿಂದ ಜೇಕು ಬೆಳೆದು ನೀರಿನ ಹರಿವು ಕಡಿಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ನೀರಿಗಾಗಿ ಪರದಾಟ- ಎಚ್ಚರಿಕೆ: ಇದೇ ರೀತಿ ಮರಳು ಗಣಿಗಾರಿಕೆ ಮುಂದುವರಿದರೆ ನೀರಿನ ಹರಿವು ಸಂಪೂರ್ಣ ನಿಂತು ಸುತ್ತಮುತ್ತಲಿನ ಜನ ಜಾನುವಾರುಗಳು ಕುಡಿಯುವ ನೀರಿಗೆ ಪರದಾಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಅಕ್ರಮವಾಗಿ ಮರಳು ಸಾಗಣಿಕೆ ಮಾಡುವುದನ್ನು ತಡೆದು ತಪ್ಪಿತಸ್ಥರನ್ನು ಕೂಡಲೇ ಶಿಕ್ಷೆಗೆ ಒಳಪಡಿಸಬೇಕು. ಒಂದು ವೇಳೆ ತಾವುಗಳು ಕ್ರಮ ತೆಗೆದುಕೊಳ್ಳುವಲ್ಲಿ ವಿಳಂಬ ನೀತಿ ಮಾಡಿದಲ್ಲಿ ಉಗ್ರ ಸ್ವರೂಪ ಹೋರಾಟ ಮಾಡಲಾಗುವುದು ಎಂದು ಸೇಡಂ ಸಹಾಯಕ ಅಯುಕ್ತರಿಗೆ ಬರೆದ ಪತ್ರವನ್ನು ಚಿತ್ತಾಪುರ ತಹಸೀಲ್ದಾರರ ಮೂಲಕ ಸಲ್ಲಿಸಿ ಆಗ್ರಹಿಸಿದ್ದಾರೆ.
ಟೆಂಗಳಿ ವಲಯ ಅಧ್ಯಕ್ಷ ವಿಶ್ವನಾಥ ಬೆಂಕಿ, ದಿಗ್ಗಾಂವ ವಲಯದ ಮಹಾದೇವ ತಗಲೂರ, ಶ್ರೀಶೈಲ್ ಮಾಶಾಳ, ರಾಜಕುಮಾರ ಎಂಟಮಾನ, ಲಕ್ಷ್ಮಿಕಾಂತ ದಂಡೋತಿ ಸೇರಿದಂತೆ ಇತರರು ಇದ್ದರು.