ದೇಶಕ್ಕೆ ಬೇಕಿದೆ ಭಗತ್ಸಿಂಗ್ರಂಥವರು
ಕ.ಪ್ರ. ವಾರ್ತೆ, ಯಾದಗಿರಿ, ಮಾ.24
ಕ್ರಾಂತಿವೀರ ಭಗತ್ಸಿಂಗ್ ಹುತಾತ್ಮರಾಗಿ 82 ವರ್ಷ ಗತಿಸಿದವು. ದೇಶ ಸ್ವಾತಂತ್ರ್ಯ ಗಳಿಸಿ ಆರು ದಶಕಗಳು ಉರುಳಿದರೂ ಬಡತನ, ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿಲ್ಲ. ಶಿಕ್ಷಣ ಮತ್ತು ಆರೋಗ್ಯ ಹಣವಂತರ ಸ್ವತ್ತಾಗಿದೆ. ಬೆಲೆ ಏರಿಕೆ ಜನರ ಜೀವನವನ್ನು ಭೀಕರವಾಗಿಸಿದೆ. ಇವುಗಳ ವಿರುದ್ಧ ಹೋರಾಡಲು ಪ್ರಸ್ತುತ ಭಗತ್ಸಿಂಗ್ರಂಥ ವ್ಯಕ್ತಿತ್ವವುಳ್ಳ ಹೋರಾಟಗಾರರ ಅಗತ್ಯ ಪ್ರಸ್ತುತದಲ್ಲಿ ದೇಶಕ್ಕಿದೆ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಸಂಚಾಲಕ ಕೆ.ಸೋಮಶೇಖರ್ ಅಭಿಪ್ರಾಯಪಟ್ಟರು.
ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಮತ್ತು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಸಂಘಟನೆಗಳ ವತಿಯಿಂದ ಭಾರತ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ಸಿಂಗ್ರ 82ನೇ ಹುತಾತ್ಮ ದಿನಾಚರಣೆಯ ನಿಮಿತ್ತ ಶನಿವಾರ ರಾತ್ರಿ ನಗರದ ಸ್ಟೇಷನ್ ರಸ್ತೆಯ ವಿದ್ಯಾ ಕಲ್ಯಾಣ ಮಂಟಪದ ಹತ್ತಿರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಗತ್ಸಿಂಗ್ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಚಿಕ್ಕಪ್ಪನ ಹೋರಾಟದಿಂದ ಪ್ರೇರಿತ: ಎಐಡಿವೈಒ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್, ಭಗತ್ಸಿಂಗ್ ಚಿಕ್ಕ ವಯಸಿನಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದರು. ಅವರ ಇಡೀ ಕುಟುಂಬವೇ ಹೋರಾಟ ನಿರತವಾಗಿತ್ತು. ಚಿಕ್ಕಪ್ಪನ ಹೋರಾಟದ ಜೀವನದಿಂದ ಭಗತ್ ಪ್ರೇರಿತರಾಗಿದ್ದರು. ಆದ್ದರಿಂದಲೇ ಅವರ ಹೃದಯ ಜನರ ಕಷ್ಟಗಳಿಗೆ ಮಿಡಿಯುತ್ತಿತ್ತು. ಇಂದು ದೇಶದಲ್ಲಿ ಎಐಡಿವೈಒ ಮತ್ತು ಎಐಡಿಎಸ್ಒ ಸಂಘಟನೆಗಳು ಉತ್ತರಾಧಿಕಾರಿಗಳಾಗಿ ಹೋರಾಟ ನಿರತವಾಗಿದೆ ಎಂದರು.
ಎಐಡಿಎಸ್ಒ ಜಿಲ್ಲಾ ಸಮಿತಿ ಅಧ್ಯಕ್ಷೆ ಗೌರಮ್ಮ ಸಿ.ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಉನ್ನತ ವಿಚಾರ, ಸಂಸ್ಕೃತಿಯನ್ನು ಬೆಳೆಸಲು ಭಗತ್ಸಿಂಗ್ರ ಜೀವನ ಹೋರಾಟದ ಸ್ಫೂರ್ತಿ ಇಂದು ದೇಶಕ್ಕೆ ಅಗತ್ಯವಾಗಿದೆ. ಭ್ರಷ್ಟಾಚಾರ, ಹಗರಣಗಳಿಂದಾಗಿ ದೇಶ ಬಡವಾಗುತ್ತಿದೆ. ಸ್ವಾತಂತ್ರ್ಯ ತನ್ನ ನೈಜ ಅರ್ಥವನ್ನೇ ಕಳೆದುಕೊಳ್ಳುತ್ತಿದೆ. ಆದ್ದರಿಂದ ಸಂಘಟನೆಗಳು ಇಂತಹ ಮಹಾನ್ ಕ್ರಾಂತಿಕಾರಿಗಳ ಜೀವನ ಹೋರಾಟದ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವ ಜನರಲ್ಲಿ ರಾಷ್ಟ್ರಪ್ರೇಮ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಎಐಡಿವೈಒ ಸಂಚಾಲಕ ಜಮಾಲ್ ಸಾಬ್ ಮಾತನಾಡಿದರು. ವಿಜಯಕುಮಾರ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.