ಮಕ್ಕಳಲ್ಲಿ ಮೌಲ್ಯತೆ ಬೆಳೆಸಿ
ಕನ್ನಡಪ್ರಭ ವಾರ್ತೆ, ಸುರಪುರ, ಮಾ.24
ಹಣ, ಆಸ್ತಿ ಮಾಡಿ ಮಕ್ಕಳನ್ನು ಸೋಮಾರಿಗಳನ್ನಾಗಿ ಮಾಡಬೇಡಿ. ಮಕ್ಕಳಿಗೆ ದುಡಿಮೆ ಕಲಿಸಿ ಮೌಲ್ಯತೆ ಬೆಳೆಸಿರಿ. ಅದು ಸಮಾಜದಲ್ಲಿ ಆತನನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ. ಕಾರಣ ಪಾಲಕರು ಮಕ್ಕಳಿಗಾಗಿ ಹಣ, ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ತಮದೊಡ್ಡಿ ವಿರಕ್ತಮಠದ ಶಿವಶಂಕರಸ್ವಾಮಿ ಕರೆ ನೀಡಿದರು.
ಇಲ್ಲಿನ ನಿಷ್ಠಿ ಕಡ್ಲಪ್ಪನವರ ವಿರಕ್ತಮಠದಲ್ಲಿ ಲಿಂ. ಮಲ್ಲಿಕಾರ್ಜುನ ಸ್ವಾಮಿಗಳ 37ನೇ ಪುಣ್ಯಸ್ಮರಣೋತ್ಸವದ ನಿಮಿತ್ತ ಶನಿವಾರ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಒಳ್ಳೆಯ ಸಂಸ್ಕಾರ ನೀಡಿ: ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ. ದೇಶದಲ್ಲಿ ಸಂಸ್ಕಾರವಿಲ್ಲದೆ ಮಕ್ಕಳೇ ಅಪರಾಧಿಗಳಾಗುತ್ತಿದ್ದಾರೆ, ವಿದ್ರೋಹಕ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಒಳ್ಳೆಯ ಸಂಸ್ಕಾರದಿಂದ ಉತ್ತಮ ವ್ಯಕ್ತಿಗಳಾಗಲು ಸಾಧ್ಯವಿದೆ. ಭಾರತೀಯ ಸಂಸ್ಕೃತಿಗೆ ಪೂರಕವಾದ ಶಿಕ್ಷಣ ಕೊಡಿಸಿ. ಶಿಕ್ಷಣದಿಂದ ಉನ್ನತ ಸ್ಥಾನ ಗಳಿಸಬಹುದು ಮತ್ತು ಕುಟುಂಬದ ಸ್ಥಿತಿ ಸುಧಾರಣೆ ಜೊತೆಗೆ ಸ್ವಾಸ್ಥ ಸಮಾಜ ನಿರ್ಮಾಣವಾಗುತ್ತದೆ. ನಿಮಗೆ ಎಷ್ಟೇ ತೊಂದರೆಯಾದರೂ ಚಿಂತೆ ಇಲ್ಲ, ಮೊದಲು ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಕರೆ ನೀಡಿದರು.
ದಾರಿ ತಪ್ಪುತ್ತಿವೆ 3 ಪ್ರಬಲ ಶಕ್ತಿಗಳು: ದೇಶದ ಮೂರು ಪ್ರಬಲ ಶಕ್ತಿಗಳಾದ ಖಾದಿ, ಕಾವಿ, ಖಾಕಿ ಹಾದಿ ತಪ್ಪುತ್ತಿರುವುದು ದುರಂತ. ಖಾದಿ ಭ್ರಷ್ಟಾಚಾರದಲ್ಲಿ ಮುಳುಗಿದರೆ, ಖಾಕಿ ಖದರ್ ಕಳೆದುಕೊಂಡಿದೆ. ಖಾವಿ ಧರಿಸಿದ ಕೆಲವರು ಹಾದಿ ತಪ್ಪುತ್ತಿದ್ದಾರೆ. ಈ ಮೂರು ಶಕ್ತಿಗಳು ಸಾಮ್ಯತೆಯಿಂದ ತಮ್ಮ ಪಾಲಿನ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಿದಲ್ಲಿ ಸಮೃದ್ದ ಭಾರತವಾಗಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ವಿ. ಕೆಂಪರಂಗಯ್ಯ, ಧರ್ಮ ದೇಶದ ಭದ್ರ ಬುನಾದಿಯಾಗಿದೆ. ಧರ್ಮವೆಂದರೆ ಪ್ರತಿಯೊಬ್ಬ ವ್ಯಕ್ತಿ ಕರ್ತವ್ಯ ಪ್ರಜ್ಞೆಯಿಂದ ಸತ್ಯ, ನ್ಯಾಯ ನಿಷ್ಠುರತೆ, ಪ್ರಾಮಾಣಿಕತೆ, ದಕ್ಷತೆ, ಪರೋಪಕಾರ ಸೇರಿದಂತೆ ಇತರೆ ಮಾನವೀಯ ಮೌಲ್ಯಗಳ ಮೇಲೆ ನಡೆಯುವುದೇ ಆಗಿದೆ. ಧರ್ಮದ ಹಾದಿ ಮೇಲೆ ನಡೆದೆರೆ ಮಾನಸಿಕ ಶಾಂತಿ ದೊರಕುತ್ತದೆ ಎಂದು ಪ್ರತಿಪಾದಿಸಿದರು.
ಮುಂದಿನ ದಿನಗಳಲ್ಲಿ ದೇಶ ಸಮೃದ್ಧ: ಟಣಕನಕಲ್ ಹಿರೇಮಠದ ಕಾಲಜ್ಞಾನಿ ಬ್ರಹ್ಮ ಶರಣಬಸವಸ್ವಾಮಿ ಮುಂದಿನ ದಿನಮಾನಗಳಲ್ಲಿ ಮಳೆ ಬೆಳೆ ಸಮೃದ್ಧವಾಗಿ ದೇಶದ ನದಿಗಳು ತುಂಬಿ ಹರಿಯುತ್ತವೆ. ಡಿಸೆಂಬರ್ ತಿಂಗಳ ದೇಶದಲ್ಲಿ ವಿಮಾನ ದುರಂತದಲ್ಲಿ ಗಣ್ಯ ವ್ಯಕ್ತಿಗಳು ಸಿಲುಕುತ್ತಾರೆ. ಜುಲೈನಲ್ಲಿ ಎರಡು ಗಲ್ಲು ಶಿಕ್ಷೆಗೆ ರಾಷ್ಟ್ರಪತಿ ಅಂಗೀಕಾರ ನೀಡುತ್ತಾರೆ. ಥೈಲ್ಯಾಂಡ್ ದೇಶದಲ್ಲಿ ಭೂಕಂಪ ಸಂಭವಿಸುತ್ತದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಕರ್ನಾಟಕದ ಬಾಲಕನೊಬ್ಬ ಕೀರ್ತಿ ಪತಾಕೆ ಹಾರಿಸುತ್ತಾನೆ.
ಕರ್ನಾಟಕ ವಿಜ್ಞಾನ ರಂಗದಲ್ಲಿ ವಿಶ್ವೇಶ್ವರಯ್ಯನಂಥ ಮೇಧಾವಿ ಜನಿಸಿ ಜಗತ್ತಿನಲ್ಲಿ ಪ್ರಸಿದ್ಧಿ ಪಡೆಯುತ್ತಾನೆ. ಶಾಸ್ತ್ರೀಯ ಸಂಗೀತ ವಿಶ್ವದಲ್ಲಿ ಕೀರ್ತಿ ಪಡೆಯುತ್ತದೆ. ನೆಲ್ಲು, ಶೇಂಗಾ, ಎಳ್ಳು, ಕುಸುಬಿ ಎಣ್ಣೆ ಕಾಳಿಗೆ ಲಾಭ, ತೈಲ ಬೆಲೆ ಕುಸಿತ, ರುಪಾಯಿ ಮೌಲ್ಯ ಏರಿಕೆಯಾಗುತ್ತದೆ ಎಂದು ಕಾಲಜ್ಞಾನವನ್ನು ಹೇಳಿದರು.
ಸನ್ಮಾನ: ಇದೇ ವೇಳೆ ರಾಷ್ಟ್ರಪತಿ ಪದಕ ಪಡೆದ ಗೃಹರಕ್ಷಕ ದಳದ ಕಮಾಂಡರ್ ಯಲ್ಲಪ್ಪ ಹುಲಕಲ್, ರಮೇಶ ಅಂಬೂರೆ, ಪುರಸಭೆ ನೂತನ ಸದಸ್ಯ ದೇವಿಂದ್ರಪ್ಪ ಕಳ್ಳಿಮನಿಯವರನ್ನು ಮಠದ ವತಿಯಿಂದ ಗೌರವಿಸಲಾಯಿತು. ಶಿವಶರಣಯ್ಯ ಬಳುಂಡಗಿಮಠ ಕಲಾತಂಡದವರಿಂದ ಸಂಗೀತಸುಧೆ ಜರುಗಿತು. ಯಾದಗಿರಿಯ ಪಾವದನಸ್ ಅಹ್ಮದ್ ಸೇಠ, ಎಲ್.ಜಿ. ಪಾಟೀಲ, ತಿಮ್ಮಪ್ಪ ನಾಯಕ ಕಟ್ಟಿಮನಿ ವೇದಿಕೆಯಲ್ಲಿದ್ದರು. ಬಸವರಾಜಪ್ಪ ನಿಷ್ಠಿ ದೇಶಮುಖ್ ಸ್ವಾಗತಿಸಿದರು, ಶರಣಬಸವ ಯಾಳವಾರ ನಿರೂಪಿಸಿದರು.