ಸಮಾನತೆ ಸಮಾಜ ನಿರ್ಮಾಣಕ್ಕೆ ಯುವಕರು ಮುಂದಾಗಲಿ: ಪೂಜಾ
ಗುಲ್ಬರ್ಗ: ಜಾತಿಯ ಬೇರು ತಳಮಟ್ಟದಿಂದ ಕಿತ್ತೊಗೆದು ಸಮಾನತೆ ತಳಹದಿ ಮೇಲೆ ಸಮಾಜವನ್ನು ನಿರ್ಮಿಸಲು ಯುವಕರು ಮುಂದಾಗಬೇಕು ಎಂದು ಎಂದು ಜಿಪಂ ಸದಸ್ಯೆ ಪೂಜಾ ರಮೇಶ ಲೋಹಾರ ಅಭಿಪ್ರಾಯಪಟ್ಟರು.
ಆಳಂದ ತಾಲೂಕಿನ ಮೋಘಾ(ಬಿ)ದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಪ್ರತಿಭಾ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಜಂಟಿ ಆಶ್ರಯದಲ್ಲಿ ನಡೆದ ಅಸ್ಪೃಶ್ಯತೆ ನಿವಾರಣೆ ಮತ್ತು ಕಮ್ಮಟ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕೆ.ಬಿ. ವಾಸು ಮಾತನಾಡಿ, ದೇಶದ ಅಭಿವೃದ್ಧಿ ಮತ್ತು ಸಮಾಜದ ಅಭಿವೃದ್ಧಿ ಆಗಬೇಕಾದರೆ ಜಾತೀಯತೆ ಸಂಪೂರ್ಣವಾಗಿ ನಾಶವಾಗಿ ಸಮಾನತೆ ಮೇಲೆ ಬದುಕು ನಿಲ್ಲಬೇಕು. ಸರ್ವರಿಗೂ ಸಮಬಾಳು, ಸಮಪಾಲು ಎಂಬ ಭಾವನೆ ಮೂಡಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸವರಾಜ ಜವಳಿ, ಪ್ರತಿಭಾ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಎಚ್. ಹುಣಸಿಗಿಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಾಬುರಾವ ವಿ. ಅರುಣೋದಯ ಅತಿಥಿಯಾಗಿ ಆಗಮಿಸಿದ್ದರು. ತಾಪಂ ಸದಸ್ಯ ಆಕಾಶ ಪಾಟೀಲ್, ಪ್ರಭಾವತಿ ಲಕ್ಷ್ಮಣ ಪೂಜಾರಿ, ಮಾಣಿಕರಾವ ಮೂಲಗೆ, ಮಂಜುನಾಥ ಮೂಲಗೆ, ಪ್ರದೀಪ ಪೋತೆ ಇದ್ದರು. ಲಕ್ಕಪ್ಪ ಜವಳಿ ಸ್ವಾಗತಿಸಿದರು. ಕಾಶಿನಾಥ ಮೂಲಗೆ ವಂದಿಸಿದರು.