ತಮ್ಮ ವಿರುದ್ಧ ರಾಜಕೀಯ ಕುತಂತ್ರ: ತೇಲ್ಕೂರ್ ಆಕ್ರೋಶ
ಕನ್ನಡಪ್ರಭ ವಾರ್ತೆ ಚಿಂಚೋಳಿ ಮಾ.25
ಸೇಡಂ ವಿಧಾನಸಭೆ ಮತಕ್ಷೇತ್ರದಲ್ಲಿ ಬಿಜೆಪಿ ಅಲೆ ಹೆಚ್ಚಾಗಿದ್ದು, ತಮ್ಮ ಜನಪ್ರಿಯತೆ ಕುಗ್ಗಿಸಲು ಮತ್ತು ಸೋಲಿನ ಭಯ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷದ ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲ್ ತಮ್ಮ ವಿರುದ್ಧ ಸಿಬಿಐ ತನಿಖೆಗೆ ಒಳಪಡಿಸಿದ್ದಾರೆ. ಇದೊಂದು ರಾಜಕೀಯ ಕುತಂತ್ರ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ್ ಆಕ್ರೋಶ ವ್ಯಕ್ತಪಡಿಸಿದರು.
ಅಭಿವೃದ್ಧಿ: ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ಮನೆ ಮನೆಗೆ ಬಿಜೆಪಿ ಜನ ಜಾಗರಣ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೇಡಂ ವಿಧಾನಸಭೆ ಚುನಾವಣೆಯಲ್ಲಿ 2 ಸಲ ಸೋತರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸುಲೇಪೇಟ ವಲಯದ 31 ಹಳ್ಳಿಗಳಲ್ಲಿ ಕುಡಿಯುವ ನೀರು, ರಸ್ತೆ ಸಂಪರ್ಕ ಇನ್ನಿತರ ಸಮಸ್ಯೆಗೆ ಸ್ಪಂದಿಸಿ ಬಿಜೆಪಿ ಸರ್ಕಾರದಿಂದ ವೈಯಕ್ತಿಕ ಪ್ರಭಾವದಿಂದ 6 ಕೋಟಿ ಹಣ ಬಿಡುಗಡೆಗೊಳಿಸಿ ಅಭಿವೃದ್ಧಿಪಡಿಸಲಾಗಿದೆ.
ರಿಬ್ಬನಪಳ್ಳಿ ವಾಗ್ದರಿ ರಸ್ತೆ ಅಭಿವೃದ್ಧಿಗೆ 240 ಕೋಟಿ, ರಸ್ತೆಗಳ ನಿರ್ಮಾಣ ಮತ್ತು ನವೀಕರಣಕ್ಕೆ 55 ಕೋಟಿ ವಿನಿಯೋಗಿಸಲಾಗಿದೆ. ಸೇಡಂ- ಚಿಂಚೋಳಿ ಮುಖ್ಯರಸ್ತೆ ಮೇಲ್ದರ್ಜೆಗೇರಿಸಲು 30 ಕೋಟಿ, 5ನೇ ಹಂತದ ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ 17 ಕೋಟಿ, ಸೇಡಂ ನಗರದ ಅಭಿವೃದ್ಧಿಗೆ ವಿವಿಧ ಯೋಜನೆಗಳ ಅಡಿಯಲ್ಲಿ 35 ಕೋಟಿ, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ 15 ಕೋಟಿ ಹಣ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.
ಸೇಡಂ ಮತಕ್ಷೇತ್ರದಲ್ಲಿನ ಪಿಕಾರ್ಡ್ ಬ್ಯಾಂಕ್, ಸೇಡಂ ಪುರಸಭೆ, ಎಪಿಎಂಸಿ, ಟಿಎಪಿಸಿಎಂಎಸ್, 20 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿಗರೇ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದಾರೆ. ಸ್ಥಳೀಯ ಪುರಸಭೆ ಚುನಾವಣೆಯಲ್ಲಿ 1400 ಮತಗಳು ಹೆಚ್ಚಿಗೆ ಪಡೆಯಲಾಗಿದೆ ಎಂದರು.
ನಿರೀಕ್ಷೆ: ಕಳೆದ 9 ವರ್ಷಗಳಿಂದ ಪಕ್ಷದ ಸಂಘಟನೆಯೊಂದಿಗೆ ಕ್ಷೇತ್ರದ ಜನಪರ ಕಾರ್ಯಚಟುವಟಿಕೆಯಲ್ಲಿ ತೊಡಗಿರುವುದರಿಂದ ಸೇಡಂ ವಿಧಾನಸಭೆಯಲ್ಲಿ 22,500 ಬಿಜೆಪಿ ಸದಸ್ಯತ್ವವನ್ನು ಮಾಡಲಾಗಿದೆ.
ಸುಲೇಪೇಟ್ ಹೋಬಳಿಯ 31 ಗ್ರಾಮಗಳಿಂದ ಹೆಚ್ಚಿನ ಮತಗಳು ಲಭಿಸಲಿವೆ ಎಂದು ನಿರೀಕ್ಷಿಸಲಾಗಿದೆ ಎಂದರು.
ಬಿಜೆಪಿ ಮುಖಂಡ ರಮೇಶ ಯಾಕಾಪುರ, ಮುಕುಂದ ದೇಶಪಾಂಡೆ, ಮಹೇಶ ಬೆಮಳಗಿ, ಅತೀಶ ಪವಾರ, ಶಿವಕುಮಾರ ಪಾಟೀಲ್ ತೇಲ್ಕೂರ್, ತಾಪಂ ಅಧ್ಯಕ್ಷ ಗೋವಿಂದ ಆಡಕಿ, ತಾಪಂ ಸದಸ್ಯ ಶರಣರೆಡ್ಡಿ, ನಿವೃತ್ತ ಡಿವೈಎಸ್ಪಿ ಸಿದ್ರಾಮಪ್ಪ ಸಣ್ಣೂರ, ವಿಶ್ವನಾಥರೆಡ್ಡಿ, ಬಸವರಾಜ ಪಾಟೀಲ್ ಕಡಗಂಚಿ, ಸಂಗಮೇಶ ಶಿರೋಳಿ, ಅರವಿಂದರೆಡ್ಡಿ, ಶರಣು ಮೆಡಿಕಲ್, ಬಸವರಾಜ ದೇವಗೊಂಡ ಇತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.