ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ. ವಾರ್ತೆ, ಯಾದಗಿರಿ, ಮಾ.25
ಘೋಷಿತ ತಾಲೂಕು ವಡಗೇರಾದಲ್ಲಿ ಕುಡಿವ ನೀರು, ರಸ್ತೆ, ಸಮರ್ಪಕ ವಿದ್ಯುತ್ ಇತ್ಯಾದಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನೇತಾಜಿ ಯುವ ಸೇನೆ ಅಧ್ಯಕ್ಷ ನಿಂಗಣ್ಣ ಜಡಿ ಮಾತನಾಡಿ, ಸುಮಾರು ಹತ್ತು ವರ್ಷಗಳಿಂದ ಕುಡಿವ ನೀರಿನ ಸರಬರಾಜು ಆಗುತ್ತಿಲ್ಲ. ಇತ್ತೀಚಿಗೆ ಕಂದಳ್ಳಿ ಭೀಮಾ ನದಿಯಿಂದ ಸುಮಾರು 3 ಕೋಟಿ ವೆಚ್ಚದಲ್ಲಿ ನೀರು ಸರಬರಾಜು ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ಮುಗಿದಿದ್ದು ಅಲ್ಲಿ ನೀರಿನ ಶುದ್ಧೀಕರಣ ಘಟಕ ಅಳವಡಿಸಿಲ್ಲ. ಭೀಮಾ ನದಿಯಿಂದ ನೇರವಾಗಿ ನಲ್ಲಿಗಳಿಗೆ ನೀರು ಬರುತ್ತಿವೆ. ಆ ನೀರು ಜನರ ಉಪಯೋಗಕ್ಕೆ ಯೋಗ್ಯವಾಗಿಲ್ಲ. ಆದ್ದರಿಂದ ಕೂಡಲೇ ಅಧಿಕಾರಿಗಳು ಪರಿಶೀಲಿಸಿ ಶುದ್ಧ ಹಾಗೂ ಶಾಶ್ವತ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಆಗ್ರಹ: ವಡಗೇರಾದಿಂದ ಯಾದಗಿರಿ ಮುಖ್ಯರಸ್ತೆ ಪೂರ್ಣ ಹದಗೆಟ್ಟಿರುವುದರಿಂದ ಹೊಸದಾಗಿ ರಸ್ತೆಯನ್ನು ನಿರ್ಮಿಸಿ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಅದೇ ರೀತಿಯಾಗಿ ಇಲ್ಲಿ ವಿಶೇಷ ತಹಸೀಲ್ದಾರ್ ಕಾರ್ಯಾಲಯವಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಕೆಲಸಕ್ಕಾಗಿ ಬರುತ್ತಾರೆ. ಇಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ ಜನರಿಗೆ ಸಕಾಲದಲ್ಲಿ ಕೆಲಸಗಳು ಆಗುತ್ತಿಲ್ಲ. ಪ್ರತಿ ದಿನ ಅವರು ತಹಸೀಲ್ದಾರ್ ಕಾರ್ಯಾಲಯಕ್ಕೆ ಅಲೆಯುತ್ತಿದ್ದಾರೆ. ಆದ್ದರಿಂದ ನಿರಂತರ ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿದರು.
ಉಪ ತಹಸೀಲ್ದಾರ್ ಪ್ರಭಯ್ಯಸ್ವಾಮಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ವೇಳೆ ಗ್ರಾಮದ ಮುಖಂಡರಾದ ಸೂಗರಡ್ಡಿಗೌಡ ಪೊಲೀಸ್ಪಾಟೀಲ್, ಹಣಮಂತ್ರಾಯ ಜಡಿ, ಮೈನೊದ್ದೀನ್ ದೇವದುರ್ಗ, ಲಿಂಗರಾಜ ಕೊಡಂಗಲ್, ಶರಣು ಇಟಿಗಿ, ಮಹಿಮೂದಸಾಬ ನಾಯ್ಕೋಡಿ, ರವಿ ವಿಶ್ವಕರ್ಮ, ಶಂಕ್ರು ಸಾಹು ಕರಣಿಗಿ, ಲಿಂಗಣಗೌಡ ಬೋರಡ್ಡಿ, ರಾಜು ಕಿರಿಹೈಯಾಳ, ಆನಂದಸ್ವಾಮಿ, ಮಲ್ಲುಗೌಡ, ಸುರೇಶ ಜಾಕಾ ಕೋನಳ್ಳಿ, ಬನಶಂಕರಯ್ಯಸ್ವಾಮಿ, ಬಸವರಾಜ ಮಾತಪಳ್ಳಿ, ಸುರೇಶ ಇತರರು ಇದ್ದರು.