ಜೀವಜಲಕ್ಕೆ ತತ್ವಾರ
ಕನ್ನಡಪ್ರಭ ವಾರ್ತೆ,ಯಾದಗಿರಿ,ಮಾ.26
ವಿಸ್ತಾರದಲ್ಲಿ ಚಿಕ್ಕ ಜಿಲ್ಲೆಯಾದರೂ ಸಮಸ್ಯೆಗಳ ಪಟ್ಟಿ ದೊಡ್ಡದು. ಸದಾಕಾಲ ತುಂಬಿ ಹರಿಯುವ ಕೃಷ್ಣಾ, ಭೀಮಾ ನದಿಗಳು ಹಾಗೂ ನೂರಾರು ದೊಡ್ಡ ಕೆರೆಗಳಿದ್ದರೂ ಬೇಸಿಗೆ ಬಂತೆಂದರೆ ಪ್ರತಿ ವರ್ಷವೂ ಜೀವಜಲಕ್ಕೆ ಪರದಾಟ ತಪ್ಪುತ್ತಿಲ್ಲ.
ನೀರಾವರಿ ಜಿಲ್ಲೆ ಎಂದು ಪರಿಗಣಿಸಲ್ಪಡುವ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನದಿ, ಕೆರೆಗಳು ವರದಾನವಾಗಿದೆ. ಆದರೆ ಇದೇ ಜಲಮೂಲಗಳಿಂದ ಕುಡಿಯುವ ನೀರಿನ ದಾಹ ತಣಿಸಲು ಸಾಧ್ಯವಾಗದಿರುವುದು ವಿಪರ್ಯಾಸ.
ನಗರ ಪ್ರದೇಶದಲ್ಲಿ ಕೋಟ್ಯಂತರ ರು.ಗಳ ನೀರು ಪೂರೈಕೆ ಯೋಜನೆ ಮಾಡಿದ್ದರೂ ಬೇಸಿಗೆಯಲ್ಲಿ ಜನರಿಗೆ ಬಾಯಾರಿಕೆ ತಣಿಸಲಾಗುತ್ತಿಲ್ಲ. ತೀರಾ ಹಿಂದುಳಿದ ನೂರಾರು ತಾಂಡಾಗಳ ಪರಿಸ್ಥಿತಿ ಇನ್ನಷ್ಟು ಭೀಕರ. ಬಿಸಿಲೂರು ಎಂದೇ ಖ್ಯಾತಿ ಪಡೆದ ಜಿಲ್ಲೆಯ ಇಂತಹ ಸಮಸ್ಯಾತ್ಮಕ ಹಳ್ಳಿಗಳಲ್ಲಿ ಜನರು ದೂರದಿಂದ ಕೊಡದಲ್ಲಿ ನೀರು ತರುವುದು ಸಾಮಾನ್ಯವಾಗಿದೆ. ಇನ್ನು ಮಳೆ ಬರುವವರೆಗೂ ಇದೇ ಪರಿಸ್ಥಿತಿ ಮುಂದುವರಿಯುತ್ತದೆ.
ನೈಜ ಬೇಸಿಗೆ ಈಗಷ್ಟೇ ಪ್ರಾರಂಭವಾಗಿದ್ದು ಈಗಲೇ ನೂರಾರು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಸಾವಿರಾರು ಜನಸಂಖ್ಯೆಯಿರುವ ಗ್ರಾಮಗಳಲ್ಲಿ ಇರುವ ಒಂದೊಂದು ಬೋರ್ವೆಲ್ಗಳ ಮುಂದೆ ಖಾಲಿ ಕೊಡಗಳ ಮೆರವಣಿಗೆ ನಡೆದೇ ಇರುತ್ತದೆ.
ಎಲ್ಲೆಲ್ಲಿ ಸಮಸ್ಯೆ?: ಈಗಷ್ಟೇ ಬೇಸಿಗೆ ಕಾಲಿಡುತ್ತಿದೆ. ಆದರೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಇರುವ ಜಲಮೂಲಗಳು ಬೇಸಿಗೆ ಬರುತ್ತಿದ್ದಂತೆ ಬತ್ತಿ ಒಣಗುತ್ತಿದೆ. ಯಾದಗಿರಿ ತಾಲೂಕಿನ ಕೇಶ್ವಾರ, ಯದ್ಲಾಪುರ, ಕಂದಕೂರಿನ ಹರಿಜನವಾಡ, ಬದ್ದೇಪಲ್ಲಿಯ ಕುಂಬಾರ ಓಣಿ, ಚಾಮನಳ್ಳಿ ತಾಂಡಾ, ಬಳಿಚಕ್ರದ ಹರಿಜನವಾಡ, ಮೋಟ್ನಳ್ಳಿ ತಾಂಡಾ, ಆಶನಾಳದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಶಹಾಪುರ ತಾಲೂಕಿನ ಧೋರನಹಳ್ಳಿ, ವಡಗೇರಾ ಹೋಬಳಿಯ ಭೀಮಾ ತೀರದ ಗ್ರಾಮಗಳು, ದಿಗ್ಗಿತಾಂಡಾ, ಕೊಂಗಂಡ ಎಸ್., ಗೋಗಿ, ಹೋತಪೇಟ, ಕಕ್ಕಸಗೇರಾ ಹಾಗೂ ಸುರಪುರ ತಾಲೂಕಿನ ಮಲ್ಲಾ ಬಿ., ಕೆಂಭಾವಿ, ಗೋಡಿಹಾಳ, ಕಿರದಳ್ಳಿ, ಏವೂರ, ಚಂದ್ಲಾಪುರ, ದೇವಿಕೇರಿ, ದೇವರಗೋನಾಳ, ಜೋಗುಂಡಬಾವಿ ಸೇರಿದಂತೆ ನೂರಾರು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉದ್ಭವವಾಗಿದೆ.
ಶುದ್ಧ ನೀರು ಮರೀಚಿಕೆ: ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಬೇಕಾದಷ್ಟು ನೀರಿದೆ. ಆದರೆ ಅದು ಕುಡಿಯಲು ಅಯೋಗ್ಯವಾಗಿರುವ ಅಂಶ ವೈಜ್ಞಾನಿಕ ಅಧ್ಯಯನದಿಂದ ಬಹಿರಂಗವಾಗಿದೆ. ಜಿಪಂ ಎಂಜಿನಿಯರಿಂಗ್ ವಿಭಾಗ ಜಿಲ್ಲೆಯ ಜಲ ಮೂಲಗಳ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದೆ. ಏವೂರು ತಾಂಡಾದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದು, ಕಿರದಳ್ಳಿ ತಾಂಡಾದಲ್ಲಿನ ನೀರಿನಲ್ಲಿ ಆರ್ಸೆನಿಕ್ ಅಂಶವಿದ್ದು, ಹತ್ತಾರು ಜನರಿಗೆ ಚರ್ಮ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಆಶನಾಳದಲ್ಲಿ ಫ್ಲೋರೈಡ್ ಅಂಶ ಅಧಿಕವಾಗಿದ್ದು, ಕುಡಿಯಲು ಯೋಗ್ಯವಲ್ಲ ಎನ್ನುವುದು ಗೊತ್ತಾಗಿದೆ.
ಜಿಲ್ಲೆಯಲ್ಲಿ ನೈಟ್ರೇಟ್ ಅಂಶ ಹೆಚ್ಚಿರುವ 300, ಫ್ಲೋರೈಡ್ ಅಧಿಕವಾಗಿರುವ 17, ಕಬ್ಬಿಣದ ಅಂಶ ಜಾಸ್ತಿ ಇರುವ 26, ಕ್ಲೋರೈಡ್ ಪ್ರಮಾಣ ಹೆಚ್ಚಿರುವ 6 ಹಾಗೂ ಗಡಸು ನೀರಿನ 15 ಜಲಮೂಲಗಳಿವೆ. ಆದರೆ ಹೀಗೆ ರಾಸಾಯನಿಕ ಅಂಶ ಹೆಚ್ಚಾಗಿರುವ ಕಡೆಗಳಲ್ಲಿ ಕೈಗೊಂಡ ಪರ್ಯಾಯ ಮೂಲದ ನೀರು ಕೂಡ ಪರಿಶುದ್ಧವಾಗಿಲ್ಲ. ಆದ್ದರಿಂದ ಜನರು ಅನಿವಾರ್ಯವಾಗಿ ರಾಸಾಯನಿಕಯುಕ್ತ ನೀರನ್ನೇ ಬಳಸುವಂತಾಗಿದೆ.
ತಪ್ಪದ ಪರದಾಟ: ಇದು ಅಂತಿಥ ಬಿಸಿಲಲ್ಲ. ಈಗಲೇ ಉಷ್ಣಾಂಶ 40 ಡಿಗ್ರಿ ಆಸುಪಾಸಿನಲ್ಲಿದ್ದು, ಇನ್ನೂ ಬಿರು ಬೇಸಿಗೆ ಬರುವುದರಲ್ಲೇ ಇದೆ. ಚಿಕ್ಕ ಹಳ್ಳಿ ಎಂದರೂ ಮೂರ್ನಾಲ್ಕು ಸಾವಿರ ಜನಸಂಖ್ಯೆ ಇಲ್ಲಿ ಮಾಮೂಲಿ. ಅಲ್ಲೆಲ್ಲ ಇರುವ ಒಂದೆರಡು ಬೋರ್ವೆಲ್ಗಳಿಂದ ಅಷ್ಟೊಂದು ಜನರ ದಾಹ ತೀರಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ವಿದ್ಯುತ್ ಸಮಸ್ಯೆ ಬೇರೆ ಅಡ್ಡಗಾಲು. ಇರುವ ಬೋರ್ ಕೈಪಂಪು ಕೆಟ್ಟರೆ ಮುಗಿಯಿತು. ಕಿಲೋಮೀಟರ್ಗಟ್ಟಲೆ ಬಿಸಿಲಲ್ಲಿ ಸಾಗಿ ಕೊಡ ನೀರು ತರುವಲ್ಲಿಗೆ ಸುಸ್ತು ಹೊಡೆಯುತ್ತಾರೆ.
ಮಹಿಳೆಯರು, ಮಕ್ಕಳು, ವೃದ್ಧರೆನ್ನದೆ ಕುಟುಂಬಕ್ಕೆ ಬೇಕಾಗುವ ನೀರು ಸಂಗ್ರಹಿಸುವುದೇ ಬೇಸಿಗೆಯ ನಿತ್ಯದ ಕಾಯಕವಾಗುತ್ತಿದೆ. ನಗರ ಪ್ರದೇಶದಲ್ಲಿ ದಿನಬಿಟ್ಟು ದಿನಕ್ಕೆ ಬರುತ್ತಿದ್ದ ನೀರು ಈಗ ನಾಲ್ಕು ದಿನ, ವಾರಕ್ಕೊಮ್ಮೆ ಎಂಬಂತಾಗಿದೆ. ನಲ್ಲಿ ಮುಂದೆ ಖಾಲಿ ಕೊಡಗಳ ಜಾತ್ರೆಯೇ ನೆರೆದಿರುತ್ತದೆ. ಚುನಾವಣೆ ಪ್ರಕ್ರಿಯೆಯ ಮಧ್ಯೆ ಜನರ ಸಮಸ್ಯೆ ಕೇಳುವವರೇ ಇಲ್ಲವಾಗಿದ್ದಾರೆ. ಅಧಿಕಾರಿಗಳು ಕುಡಿವ ನೀರು ಸಮಸ್ಯೆ ಬಗೆಹರಿಸಲು ತುರ್ತು ಕ್ರಮ ಕೈಗೊಳ್ಳದಿದ್ದರೆ ಜನ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.
-ನಾರಾಯಣ ಹೆಗಡೆ