ಅಂಬೇಡ್ಕರ್ ಜಯಂತಿ ಆಚರಣೆಗೆ ನಿರ್ಧಾರ (ಸುದ್ದಿ ಸಂಕ್ಷೇಪ)
ಶಹಾಪುರ: ಮಹಾಮಾನವತಾವಾದಿ ಡಾ. ಅಂಬೇಡ್ಕರರ ಜನ್ಮ ದಿನಾಚರಣೆಯನ್ನು ಏ.14ರಂದು ಅದ್ಧೂರಿಯಿಂದ ಆಚರಿಸಲು ದಲಿತ ಸಂಘಟನೆಗಳ ಒಕ್ಕೂಟದ ಪ್ರಮುಖರು ಇಲ್ಲಿನ ಧಮ್ಮಗಿರಿಯಲ್ಲಿ ವಿಶೇಷ ಸಭೆ ಸೇರಿ ಹಲವು ತೀರ್ಮಾನಗಳನ್ನು ಕೈಗೊಂಡರು. ಚಂದಪ್ಪ ಸೀತನಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಕುರಿತು ಸಮಾಲೋಚಿಸಿದರು. ನೀಲಕಂಠ ಬಡಿಗೇರ, ದೇವಿಂದ್ರ ಹೆಗ್ಗಡೆ, ಟಿ.ಶಶಿಧರ, ಮಲ್ಲಪ್ಪ ಬೀರನೂರ ಮಾತನಾಡಿ, ದಲಿತ ಪರ ಚಿಂತನೆಯ ವಿಚಾರವಂತರನ್ನು ಕರೆಸಿ ಅಂಬೇಡ್ಕರ್ ವಿಚಾರಧಾರೆಗಳನ್ನು ಸರ್ವರಿಗೂ ತಲುಪಿಸುವುದು, ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಜಾಗೃತಿ ವಹಿಸುವುದು ಮತ್ತು ಹೆಚ್ಚಿನ ಸಂಖ್ಯೆಯ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಸೇರಿದಂತೆ ಅರ್ಥಪೂರ್ಣ ಆಚರಣೆಗೆ ಈಗಿನಿಂದಲೇ ಯೋಜನೆ ರೂಪಿಸುವ ಕುರಿತು ತಿಳಿಸಿದರು. ಚಂದ್ರು ಚಕ್ರವರ್ತಿ, ನಾಗಣ್ಣಾ ಬಡಿಗೇರ, ಭಾಗಪ್ಪ ಮುಂಡಾಸ, ಮಹಾದೇವದಿಗ್ಗಿ, ಸಿದ್ದಪ್ಪ ಬೇವಿನಳ್ಳಿ, ದೇವಿಂದ್ರ ಗೌಡೂರು, ಮರೆಪ್ಪಕ್ರಾಂತಿ, ಈರಣ್ಣ ಕಸನ್, ಶರಣಪ್ಪ ಹೊಸ್ಮನಿ, ರಾಯಪ್ಪಗಂಗನಾಳ, ಶಿವು ತಳವಾರ, ಶಿವಪುತ್ರ ಜವಳಿ, ಬಸವರಾಜ, ಶರಣಪ್ಪ, ಮಲ್ಲಿಕಾರ್ಜುನ ಗೋಗಿ, ಮರೆಪ್ಪ ಜಾಲಿಬೆಂಚಿ, ತಿಪ್ಪಣ್ಣಾ ಘಂಟಿ, ಗುರುಬಾಣತಿಹಾಳ, ದೇವಿಂದ್ರ ದಿಗ್ಗಿ ಇದ್ದರು.
ಸಮಿತಿ ರಚನೆ: ಡಾ. ಅಂಬೇಡ್ಕರ ಜನ್ಮದಿನಾಚರಣೆ ನೂತನ ಸಮಿತಿ ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಮಹಾದೇವಪ್ಪ ಬಬಲಾದಿ, ಅಧ್ಯಕ್ಷರನ್ನಾಗಿ ಭೀಮರಾಯ ಹೊಸ್ಮನಿ, ಕಾರ್ಯಾಧ್ಯಕ್ಷರಾಗಿ ಮಾನಪ್ಪ ಮಕ್ತಾಪುರ, ಡಾ. ರವೀಂದ್ರನಾಥ ಹೊಸ್ಮನಿ, ಪ್ರಧಾನ ಕಾರ್ಯದರ್ಶಿಯಾಗಿ ಹೊನ್ನಪ್ಪ ಗಂಗನಾಳ, ಕಾರ್ಯದರ್ಶಿಯಾಗಿ ಮರೆಪ್ಪದೊಡ್ಮನಿ, ಖಜಾಂಚಿಯಾಗಿ ಪರಶುರಾಮ ಹೊಸ್ಮನಿ ಅವರನ್ನು ಆಯ್ಕೆ ಮಾಡಲಾಯಿತು.
ನೆನೆಗುದಿಗೆ ಹಳಿಪೇಟೆ ರಸ್ತೆ ಕಾಮಗಾರಿ
ಶಹಾಪುರ: ಪಟ್ಟಣದ ಮುಖ್ಯ ರಸ್ತೆಗಳು ಕೆಲವಡೆ ಡಾಂಬರ್ ರಸ್ತೆ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದು ಒಂದಡೆಯಾದರೆ, ಹಳಿಪೇಟೆಗೆ ಹೊಂದಿಕೊಂಡಂತೆ ಅರ್ಧ ಸಿಸಿ ರಸ್ತೆ ನಿರ್ಮಿಸಿ ಗುತ್ತಿಗೆದಾರರು ಕಾಮಗಾರಿ ನಿರ್ವಹಿದೇ ಬಿಟ್ಟಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಚರಂಡಿ ಕಾಮಗಾರಿಯೂ ಅರ್ಧಕ್ಕೆ ನಿಂತಿದ್ದು, ಚರಂಡಿ ನೀರು ಮುಂದೆ ಹರಿಯದೇ ತ್ಯಾಜ್ಯ ನೀರಿನಿಂದ ರೋಗ ರುಜಿನ ಹರಡುವ ಭೀತಿ ಎದುರಾಗಿದೆ. ಮುಖ್ಯರಸ್ತೆಯಿಂದ ಓಣಿಗೆ ಹೋಗುವ ರಸ್ತೆಗೆ ಚರಂಡಿಗಳ ಮೇಲೆ ಸ್ಲ್ಯಾಬ್ ಹಾಕುವುದನ್ನೂ ಮರೆತಿದ್ದು, ದಿನನಿತ್ಯ ವಾಹನ ಸಂಚಾರಕ್ಕೂ ಅಡೆತಡೆಯಾಗಿದೆ. ಸಂಬಂಧಿಸಿದ ಗುತ್ತಿಗೆದಾರರ ನಿಷ್ಕಾಳಜಿಗೆ ಇದು ಸಾಕ್ಷಿಯಾಗಿದ್ದು ಪುರಸಭೆ ಮುಖ್ಯಾಧಿಕಾರಿಗಳು ಈ ಕುರಿತು ಸೂಕ್ತ ನಿರ್ದೇಶನ ನೀಡಬೇಕು. ಸರ್ಕಾರ ಯೋಜನೆ ರೂಪಿಸಿದ್ದರೂ ಅದನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ತಕ್ಷಣವೇ ಉಳಿದಿರುವ ಸಿಸಿರಸ್ತೆ ಮತ್ತು ಚರಂಡಿಗಳ ಮೇಲೆ ಸ್ಲ್ಯಾಬ್ ಹಾಕುವ ಕಾಮಗಾರಿ ಕೈಗೊಳ್ಳಬೇಕು ಎಂದು ಹಳೆಪೇಟೆ ಜನತೆ ಆಗ್ರಹಿಸಿದ್ದಾರೆ.