ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಚುನಾವಣಾ ಜವಾಬ್ದಾರಿ ಮರೆತೀರಿ ಜೋಕೆ!

Rashmi Kasaragodu
Updated On : 28 Mar 2013, 11:27 am

ಕನ್ನಡಪ್ರಭ ವಾರ್ತೆ, ಯಾದಗಿರಿ, ಮಾ.27
ವಿಧಾನಸಭಾ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ರೀತಿಯಲ್ಲಿ ನಡೆಯಲು ಅನುಕೂಲವಾಗುವಂತೆ ಚುನಾವಣಾ ಕಾರ್ಯಕ್ಕೆ ನೇಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ರೀತಿಯ ಲೋಪ ಆಗದಂತೆ ಎಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಫ್.ಆರ್. ಜಮಾದಾರ ಸೂಚಿಸಿದ್ದಾರೆ.
  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ಕಾರ್ಯಕ್ಕೆ ವಿವಿಧ ತಂಡಗಳ ರಚನೆಗಾಗಿ ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿದ್ದು ಚುನಾವಣಾ ಕಾರ್ಯಕ್ಕೆ ಸಹಕರಿಸಬೇಕು. ನಿರ್ಲಕ್ಷ್ಯ ಭಾವನೆ ತೊರೆದು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲೆಯ ಎಲ್ಲ ನಾಲ್ಕು ವಿಧಾನಸಭೆ ಚುನಾವಣಾ ಪ್ರಕ್ರಿಯೆಯು ವ್ಯವಸ್ಥಿತವಾಗಿ ನಡೆಯಬೇಕು. ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅನೈತಿಕ ಚಟುವಟಿಕೆಗಳು ನಡೆಯದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದರು.
20 ತಂಡ ರಚನೆ: ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಉಲ್ಲಂಘನೆ ತಡೆಯಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ 20 ತಂಡಗಳನ್ನು ರಚಿಸಲಾಯಿತು. 4 ಜನ ಚುನಾವಣಾ ಅಧಿಕಾರಿಗಳು, ಚುನಾವಣಾ ವೀಕ್ಷಕರೊಂದಿಗೆ ಇರಲು 7 ಜನ ಮಾರ್ಗದರ್ಶಕ ಅಧಿಕಾರಿಗಳು, ಜಿಪಂ ಸಿಇಒ ಅವರನ್ನು ಜಿಲ್ಲಾ ನೋಡಲ್ ಅಧಿಕಾರಿಯಾಗಿ ಹಾಗೂ ಇತರೆ 4 ಜನ ನೋಡಲ್ ಆಫೀಸರ್ ಹಾಗೂ ಫ್ಲೈಯಿಂಗ್ ಸ್ಕ್ವಾಡ್ ಒಳಗೊಂಡ ತಂಡಗಳನ್ನು ರಚಿಸಲಾಯಿತು.
  ಚುನಾವಣಾ ಪ್ರಕ್ರಿಯೆ ಅತ್ಯಂತ ಜವಾಬ್ದಾರಿಯುತ ಕಾರ್ಯವಾಗಿರುವುದರಿಂದ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲಾಧಿಕಾರಿ ವರ್ಗಾವಣೆಯಂತಹ ಪ್ರಕ್ರಿಯೆ ನಡೆದರೂ ಕೂಡ ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ಜಮಾದಾರ ತಿಳಿಸಿದರು.
ಕಟ್ಟೆಚ್ಚರ ವಹಿಸಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಚುನಾವಣೆ ಸಂದರ್ಭದಲ್ಲಿ ಅಕ್ರಮಗಳನ್ನು ತಡೆಯಲು ಚುನಾವಣಾ ಆಯೋಗದ ಹದ್ದಿನ ಕಣ್ಣು ಇರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಚಿಸಿರುವ ನೀತಿ ಸಂಹಿತೆ   ಉಲ್ಲಂಘನೆ ತಡೆಯುವ ತಂಡವು ಅಚ್ಚುಕಟ್ಟಾಗಿ, ಕಟ್ಟುನಿಟ್ಟಿನ ಕ್ರಮಗಳನ್ನು ಮತ್ತು ಕಟ್ಟೆಚ್ಚರವನ್ನು ವಹಿಸುವಂತೆ ಹೇಳಿದರು.
  ಚುನಾವಣೆ ಸಂದರ್ಭದಲ್ಲಿ ಅತಿ ಹೆಚ್ಚು ಅಕ್ರಮ ಚಟುವಟಿಕೆಗಳಿಗೆ ಖರ್ಚು ವೆಚ್ಚ ನಡೆಯುವ ಸಾಧ್ಯತೆ ಇದೆ. ಕಾರಣ ತಕ್ಷಣ ಮುನ್ನೆಚ್ಚರಿಕೆ ವಹಿಸಿ ಮತದಾರರಿಗೆ ಆಮಿಷವೊಡ್ಡುವ ಮತ್ತು ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಬೇಕು. ಇದಕ್ಕಾಗಿ ವೀಡಿಯೋ ಸರ್ವೇಲೆನ್ಸ್ ತಂಡ, ಫ್ಲೈಯಿಂಗ್ ಸ್ಕ್ವಾಡ್ ರಚಿಸಲಾಗುತ್ತಿದೆ. ವಿವಿಧ ಪಕ್ಷಗಳ ಮತ್ತು ಅಭ್ಯರ್ಥಿಗಳ ಖರ್ಚು ವೆಚ್ಚ ವೀಕ್ಷಣೆಗೆ ತಂಡಗಳು ಕಾರ್ಯನಿರ್ವಹಿಸಲಿವೆ.
ಹಣ ಪೋಲು ತಡೆಯಲು ಸೂಚನೆ: ಚುನಾವಣೆಯಲ್ಲಿ ಹಣ ಪೋಲಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕುಗಳಲ್ಲಿ ಹಣ ವರ್ಗಾವಣೆ ಅಥವಾ ದೊಡ್ಡ ಮೊತ್ತದ ಹಣ ಸಂದಾಯದ ಬಗ್ಗೆ ಗಮನ ಹರಿಸಬೇಕು. 20 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಹಣ ಚೆಕ್ ರೂಪದಲ್ಲಿಯೇ ವ್ಯವಹಾರ ಆಗಬೇಕು. ಮದ್ಯ ಸರಬರಾಜು ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
 ಜಿಪಂ ಸಿಇಒ ಎಸ್.ಎ ಜಿಲಾನಿ, ಅಪರ ಜಿಲ್ಲಾಧಿಕಾರಿ ಜಹೀರಾ ನಸೀಮ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement