ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸತ್ಯಾಗ್ರಹ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.27
6ನೇ ವೇತನ ಶ್ರೇಣಿ ನೀಡಬೇಕೆಂಬ ಪ್ರಧಾನ ಬೇಡಿಕೆ ಒಳಗೊಂಡಂತೆ ಒಟ್ಟು 9 ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕೆಂದು ಒತ್ತಾಯಿಸಿ ಎಂ.ಆರ್. ಮೆಡಿಕಲ್ ಕಾಲೇಜಿನ ಬೋಧಕೇತರ ಸಿಬ್ಬಂದಿ ಅನಿರ್ಧಿಷ್ಟ ಅವಧಿಯ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ.
ಎಂ.ಆರ್. ಮೆಡಿಕಲ್ ಕಾಲೇಜಿನ ಬೋಧಕೇತರ ನೌಕರರ ಸಂಘದ ಉಪಾಧ್ಯಕ್ಷ ಗುರಣ್ಣ ಜಿ. ಪಾಕೀನ್ ಅವರು ಆಮರಣ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಗೌರಿಶಂಕರ ಕೊರಳ್ಳಿ, ಜಿ.ಎಸ್. ಧಮ್ಮೂರ, ಸಂಗಪ್ಪ ಚೋರಗಸ್ತಿ, ಸಿ.ಆರ್. ಮುಗಳಿ ಹಾಗೂ ಶಾಂತಾಬಾಯಿ ಒಂದು ದಿನದ ಸರದಿ ಉಪವಾಸ ಸತ್ಯಾಗ್ರಹ ಕೈಗೊಂಡರು.
ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ಭೀಮಾಶಂಕರ ಬಿಲಗುಂದಿ, ರಾಜು ಭೀಮಳ್ಳಿ ಮತ್ತು ಆರ್.ಎಸ್. ಹೊಸಗೌಡ ಭೇಟಿ ನೀಡಿ ಬಹಿರಂಗವಾಗಿ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಬೋದಕೇತರ ಸಿಬ್ಬಂದಿಯ ಎಲ್ಲ 9 ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕೆಂದು ಲಿಖಿತ ರೂಪದಲ್ಲಿ ಸಂಸ್ಥೆಯ ಅಧ್ಯಕ್ಷ ಶಶೀಲ ಜಿ. ನಮೋಶಿಯವರಿಗೆ ಒತ್ತಾಯಿಸಿದ್ದಾಗಿ ಉಪವಾಸ ನಿರತ ನೌಕರರಿಗೆ ಭರವಸೆ ನೀಡಿದರು. ಬೋಧಕೇತರ ನೌಕರರ ಮುಷ್ಕರದಿಂದ ಎಂ.ಆರ್. ಮೆಡಿಕಲ್ ಕಾಲೇಜಿನಲ್ಲಿ ಪಾಠ ಪ್ರವಚನಗಳು ನಡೆಯಲಿಲ್ಲ ಎಂದು ಅಧ್ಯಕ್ಷ ಬೋದೆಗೊಡ ಪಾಟೀಲ್, ಕಾರ್ಯದರ್ಶಿ ಶಿವಶಂಕರ ತಿಳಿಸಿದ್ದಾರೆ.