ಖಾತ್ರಿ ಕೂಲಿ ಪಾವತಿಗೆ ಒತ್ತಾಯ
ಯಾದಗಿರಿ: ತಾಲೂಕಿನ ಅಜಲಾಪುರ ಗ್ರಾಪಂ ವ್ಯಾಪ್ತಿಯ ಬದ್ದೇಪಲ್ಲಿ ಮತ್ತು ಅಜಲಾಪುರ ಗ್ರಾಮಗಳಲ್ಲಿ ಕೂಲಿ ನಿಲ್ಲಿಸಿರುವುದನ್ನು ಕಾರ್ಮಿಕರು ಖಂಡಿಸಿದ್ದಾರೆ. ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೇವಲ 6 ದಿನ ಕೆಲಸ ಕೊಟ್ಟು ಕಾಮಗಾರಿಯನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಸಮಿತಿ ಗುರುವಾರ ಜಿಪಂ ಸಿಇಒಗೆ ಮನವಿ ಸಲ್ಲಿಸಿತು.
ಯಂತ್ರಗಳ ಬಳಕೆ: ಸಂಘದ ಜಿಲ್ಲಾಧ್ಯಕ್ಷ ದಾವುಲ್ಸಾಬ ನದಾಫ್ ಹಾಗೂ ಇತರರು ಗುರುವಾರ ಮನವಿ ಸಲ್ಲಿಸಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಾಬ್ ಕಾರ್ಡ್ ಹೊಂದಿದವರಿಗೆ ಕನಿಷ್ಟ ನೂರು ದಿನ ಕೆಲಸ ಕೊಡಬೇಕೆಂಬ ನಿಯಮವಿದೆ. ಆದರೂ ಕೆಲಸ ಕೊಡದೇ ಹಾಗೂ ಕೂಲಿ ಹಣ ಕೊಡದೇ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಕಾಮಾಗಾರಿ ಸ್ಥಳದಲ್ಲಿ ಯಂತ್ರಗಳ ಬಳಕೆ ರಾಜಾರೋಷವಾಗಿ ನಡೆಸುತ್ತಿದ್ದಾರೆ.
ಮೊಕದ್ದಮೆ ದಾಖಲಿಸಿ: ಗುತ್ತಿಗೆದಾರರಿಗೆ, ಗ್ರಾಪಂ ಸದಸ್ಯರಿಗೆ ಕೆಲಸ ಕೊಟ್ಟು ಕೂಲಿಕಾರರಿಗೆ ಕೆಲಸ ಇಲ್ಲದಂತೆ ಗ್ರಾಪಂ ಅಧಿಕಾರಿಗಳು ಮಾಡುತ್ತಿದ್ದಾರೆ. ಯಂತ್ರವನ್ನು ಬಳಕೆ ಮಾಡಿದ ಗುತ್ತಿಗೆದಾರ ಮತ್ತು ಗ್ರಾಪಂ ಸದಸ್ಯರು, ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಅವರು ಆಗ್ರಹಿಸಿದರು. ಶಹಾಪುರ ತಾಲೂಕಿನ ಗೋನಾಲ ಗ್ರಾಪಂ ವ್ಯಾಪ್ತಿಯಲ್ಲಿನ ಶಿವಪುರ, ಕೊಂಗಂಡಿ, ಸೂಗೂರ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಕಾಮಾಗಾರಿಯಡಿ ಕೆಲಸ ಮಾಡಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ ಕೂಲಿಕಾರರಿಗೆ ಹಣ ನೀಡದೆ ಸತಾಯಿಸುತ್ತಿದ್ದಾರೆ. ಗ್ರಾಪಂ ಪಿಡಿಒ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಗೋನಾಲ ಗ್ರಾಮದ ಬಸವ ವಸತಿ ಯೋಜನೆಯಡಿಯಲ್ಲಿ ಮನೆಗಳನ್ನು ರದ್ದುಪಡಿಸಿರುವ ಮಮತಾಜ್, ಚನ್ನಮ್ಮ ಬಂದಪ್ಪ, ದೇವಮ್ಮ ಆಶಪ್ಪನೋರ, ಚನ್ನಮ್ಮ ನಾಗಪ್ಪ ಸೇರಿದಂತೆ ಇನ್ನಿತರ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಹಣ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.