ನಾಳೆಯಿಂದ ಕಾನೂನು ಸಾಕ್ಷರತಾ ರಥಯಾತ್ರೆ
ಶಹಾಪುರ: ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಇನ್ನಿತರ ಸಂಘಟನೆಗಳ ಆಶ್ರಯದಲ್ಲಿ ಜನ ಸಾಮಾನ್ಯರಿಗೆ ಕಾನೂನು ಮಾಹಿತಿಗಾಗಿ ಮಾ.30ರಿಂದ ಮೂರು ದಿನಗಳ ಕಾಲ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯದ ಅಭಿಯಾನ ಯಾತ್ರೆ ನಡೆಯಲಿದೆ ಎಂದು ಕಾನೂನು ಸೇವಾ ಸಮಿತಿಯ ಎಲ್.ಡಿ.ಪಾಟೀಲ್ ತಿಳಿಸಿದ್ದಾರೆ. ತಾಲೂಕಿನಲ್ಲಿ 3 ದಿನಗಳ ಕಾಲ ಕಾನೂನು ಸಾಕ್ಷರತಾ ರಥ ಸಂಚರಿಸಲಿದೆ. ಪ್ರತಿದಿನ ಮೂರು ಕಡೆಗಳಿಗೆ ರಥ ಭೇಟಿ ನೀಡುತ್ತದೆ. ಸಂಚಾರ ಸಂದರ್ಭದಲ್ಲಿ ಸಕಾರೇತರ ಸಂಸ್ಥೆಗಳ ಆಶ್ರಯದಲ್ಲಿ ವಕೀಲರಿಂದ ಕಾನೂನು ಅರಿವು ಮೂಡಿಸುವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಜನಸಾಮಾನ್ಯರಿಗಾಗಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಮಾ.30ರಂದು ಬೆಳಗ್ಗೆ 9ಕ್ಕೆ ಪಟ್ಟಣದ ಸರ್ಕಾರಿ ನೌಕರರ ಭವನದ ಬಳಿ ಸಾಕ್ಷರತಾ ರಥವನ್ನು ನ್ಯಾಯಾಧೀಶ ಹಾಗೂ ಕಾನೂನು ಸೇವಾ ಸಮಿತಿ ಅಧ್ಯಕ್ಷ ಜಿ.ಎಸ್.ದೇಶಪಾಂಡೆ, ನಂತರ ಕಾನೂನು ಅರಿವು ಮೂಡಿಸುವ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಅದರಂತೆ ತಾಲೂಕಿನ ಕೊಂಕಲ್, ಗೊಂದೆನೂರ, ಕಿರಿ ಹೈಯ್ಯಾಳ, ಮುಡಬೂಳ, ಮದ್ರಿಕಿ, ಭೀಮರಾಯನಗುಡಿ ಪ್ರದೇಶಕ್ಕೆ ರಥ ಭೇಟಿ ನೀಡಲಿದೆ ಎಂದು ತಿಳಿಸಿದ್ದಾರೆ. ನ್ಯಾಯಬದ್ದ ಕಾನೂನಿನಿಂದ ವಂಚಿತರಾದವರು ಜಿಲ್ಲಾ ಕಾನೂನು ಪ್ರಾಧಿಕಾರಕ್ಕೆ ಇಲ್ಲವೆ ತಾಲೂಕು ಮಟ್ಟದಲ್ಲಿ ಕಾನೂನು ಸೇವಾ ಸಮಿತಿಗೆ ಮನವಿ ಸಲ್ಲಿಸಬಹುದು ಎಂಬ ಜಾಗೃತಿಯನ್ನು ಮೂಡಿಸುವುದು ಸಂಚಾರದ ಮೂಲೋದ್ದೇಶವೆಂದು ಪಾಟೀಲ್ ತಿಳಿಸಿದ್ದಾರೆ.
ಇಂದು ಕೃಷಿ ತರಬೇತಿ ಶಿಬಿರ
ಸುರಪುರ: ತಾಲೂಕಿನ ಹೆಗ್ಗಣದೊಡ್ಡಿಯಲ್ಲಿ ಮಾ.29ರಂದು ಶುಕ್ರವಾರ ರೈತರಿಗಾಗಿ ಸಾವಯವ ಕೃಷಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಯುವ ಮಾನವ ಹಕ್ಕುಗಳ ಸಂಘಟನೆಯ ತಾಲೂಕು ಅಧ್ಯಕ್ಷ ಶಿವರಾಜ ನಾಯಕ ತಿಳಿಸಿದರು. ಹೆಗ್ಗಣದೊಡ್ಡಿ ಗ್ರಾಮದ ಲಾಡ್ಲೆ ಪಟೇಲರ ಜಮೀನಿನಲ್ಲಿ ಶುಕ್ರವಾರ ಬೆಳಗ್ಗೆ 10ಕ್ಕೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸಾವಯವ, ಜೀವ ಚೈತನ್ಯ ಹಾಗೂ ಸಾವಯವ ದೃಡೀಕರಣದ ಬಗ್ಗೆ ರೈತರಿಗೆ, ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ, ಸಾರ್ವಜನಿಕರಿಗಾಗಿ ತರಬೇತಿ ನೀಡಲಾಗುತ್ತಿದೆ. ಕಾರಣ ರೈತರು ಇದರ ಲಾಭ ಪಡೆದುಕೊಳ್ಳಬೇಕೆಂದು ಕೋರಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬ ರೈತ 175 ತರಬೇತಿ ಶುಲ್ಕು ನೀಡಿ ಹೆಸರನ್ನು ನೋಂದಾಯಿಸಬೇಕು. ಮುಕಬುಲ್ ಪಟೇಲ್ (9740480154), ಹಣಮಂತ್ರಾಯ ಮೇಟಿ (9731647946), ಅಂಬ್ರೇಶ ಮಾನಿನಮಟ್ಟಿ (9901719144) ಸಂಪರ್ಕಿಸುವಂತೆ ಶಿವರಾಜ ತಿಳಿಸಿದ್ದಾರೆ.