ಅಕ್ರಮ ಸಾರಾಯಿ ಮಾರಾಟ; ಇಬ್ಬರ ಸೆರೆ
ಸುರಪುರ: ತಾಲೂಕಿನ ಹಾಲಗೇರಾ, ಚಿಕ್ಕನಳ್ಳಿ ಹಾಗೂ ಲಕ್ಷ್ಮೀಪುರ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ನಡೆಸಿ ಇಬ್ಬರನ್ನು ಬಂಧಿಸಿದ ಘಟನೆ ಜರುಗಿದೆ. ಹಾಲಗೇರಾ ಗ್ರಾಮದ ಕಿರಾಣಾ ಅಂಗಡಿಯೊಂದರಲ್ಲಿ ಬಸಪ್ಪ ಸೋಮಯ್ಯ ಹೀರಿಗಡ್ಡಿ ಎಂಬುವರನ್ನು ಬಂಧಿಸಿ 2,836 ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಲಕ್ಷ್ಮೀಪುರ ಗ್ರಾಮದ ಯಲ್ಲಪ್ಪ ದೇವಪ್ಪ ಹಳಿಸಗರ ಎಂಬವರನ್ನು ಬಂಧಿಸಿ 9,542 ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಚಿಕ್ಕನಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಶಾಹೀದ್ ಶಫೀಕ್ ಅಹ್ಮದ ಪರಾರಿಯಾಗಿದ್ದು, 4630 ಮೌಲ್ಯದ ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಕ್ರಮ ಮದ್ಯ ಮಾರಾಟದ ಖಚಿತ ಮಾಹಿತಿ ಮೇರೆಗೆ ಎಸ್ಪಿ ವಂಶಿಕೃಷ್ಣ ಮಾರ್ಗದರ್ಶನದಲ್ಲಿ ಪಿಐ ರಾಜಕುಮಾರ ವಾಜಂತ್ರಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಪಿಎಸ್ಐ ಶರಣಬಸಪ್ಪ ಅಜೂರ್ ಮತ್ತು ಸಿಬ್ಬಂದಿ ಬಸವರಾಜನಾಯಕ, ಬೀರಪ್ಪ ಪೂಜಾರಿ, ಗಣಪತಿ, ಜಗನ್ನಾಥರೆಡ್ಡಿ, ಶಿವಲಿಂಗ ಇತರರು ದಾಳಿಯಲ್ಲಿ ಭಾಗವಹಿಸಿದ್ದರು. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.