ಆಹಾರಕ್ಕೆ ಪ್ರಸಾದ ಭಾವನೆ ತಂದವರು ಶರಣರು: ಶ್ರೀಗಳು
ಯಾದಗಿರಿ: 12ನೇ ಶತಮಾನದ ಶರಣರಲ್ಲಿ ಒಬ್ಬರಾದ ಬಿಬ್ಬಿ ಬಾಚಯ್ಯನವರ ಜೀವನವೇ ಪ್ರಸಾದಮಯವಾಗಿಸಿಕೊಂಡಿದ್ದರು. ತಿನ್ನುವ ಆಹಾರಕ್ಕೆ ಪ್ರಸಾದವೆಂಬ ಪವಿತ್ರ ಭಾವನೆ ತಂದುಕೊಟ್ಟವರು ಬಸವಾದಿ ಶರಣರು ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ ನುಡಿದರು.
ತಾಲೂಕಿನ ಗಾಜರಕೋಟದ ಶಿವಶರಣ ಚೆನ್ನಪ್ಪಯ್ಯನವರ ಮಹಾಮನೆಯಲ್ಲಿ ಹಮ್ಮಿಕೊಂಡಿದ್ದ ಅರಿವು ಆಚಾರ ಮಾಸಿಕ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿ ಶರಣರೂ ಒಂದೊಂದು ಅನುಭಾವ ಮತ್ತು ವಿಶೇಷತೆ ಹೊಂದಿದ್ದರು. ಒಬ್ಬೊಬ್ಬ ಶರಣರು ಒಂದೊಂದು ಅನುಭವ ಮಂಟಪವಾಗಿದ್ದರು.
ಬದುಕೇ ಪ್ರಸಾದ: ಬಿಬ್ಬಿ ಬಾಚಯ್ಯನ ಊರು ರಾಯಚೂರು ಜಿಲ್ಲೆ ಗೊಬ್ಬೂರು. ಪ್ರಸಾದ ಜೀವಿಯಾದ ಬಾಚಯ್ಯನು ಒಮ್ಮೆ ಪ್ರಸಾದವನ್ನು ತೆಗೆದುಕೊಂಡು ಹೋಗುತ್ತಿದ್ದ ಮಾರ್ಗದಲ್ಲಿ ವೈದಿಕರು ಪ್ರಸಾದವನ್ನು ಎಂಜಲೆಂದು ಜರಿದಿದ್ದರು. ಆಗ ತನ್ನ ಪ್ರಸಾದ ಮಹಿಮೆಯಿಂದ ಅವರ ಮನೆಗಳನ್ನು ಸುಟ್ಟು ಅರುಹಿಹಿದ ಎಂಬುದು ಒಂದು ಐತಿಹ್ಯ. ಇವರು ಏಣಾಂಕಧರ ಸೋಮೇಶ್ವರಲಿಂಗ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ. ಚೆನ್ನಬಸವಣ್ಣನವರೇ ಪ್ರಸಾದಿ ಬಿಬ್ಬಿ ಬಾಚಯ್ಯ ಎಂದು ಪ್ರಶಂಸಿಸಿರುವುದು ಬಾಚಯ್ಯನ ವ್ಯಕ್ತಿತ್ವಕ್ಕೆ ಕನ್ನಡಿ. ಪ್ರಸಾದದ ವಿಷಯ ನೆನಪಾದಾಗಲೆಲ್ಲ ನೆನಪಾಗುವುದು ಇಬ್ಬರು ವ್ಯಕ್ತಿಗಳು. ಒಬ್ಬರು ಪ್ರಸಾದದ ಕುಂಡದಲ್ಲಿಯೇ ಇದ್ದ ಶರಣ ಮರುಳಶಂಕರ ದೇವರು. ಶರಣರ ಸ್ಮರಣೋತ್ಸವವನ್ನು ಆಯೋಜಿಸಿದ ಗಾಜರಕೋಟ ಸೇವಾ ಸಮಿತಿ ಕಾರ್ಯ ಔಚಿತ್ಯಪೂರ್ಣ ಎಂದರು.
ದ್ವಂದ್ವ ಬೇಡ: ಸಾಹಿತಿ ಬಸವರಾಜ ಶಾಸ್ತ್ರಿ ಮಾತನಾಡಿ, ಜಗತ್ತು ಸುಖ-ದುಃಖವೆಂಬ ದ್ವಂದ್ವದಿಂದ ಕೂಡಿದೆ. ಸುಖ ಬಂದಾಗ ಹಿಗ್ಗಬಾರದು, ದುಃಖ ಬಂದಾಗ ಕುಗ್ಗಬಾರದು. ಸಮಸ್ಥಿತಿಯಿಂದ ನಮ್ಮ ಬಾಳನ್ನು ಸ್ವೀಕರಿಸಬೇಕು. ಶರಣರ ಜೀವನ ದ್ವಂದ್ವಾತೀತವಾಗಿತ್ತು. ನಮ್ಮ ಎಲ್ಲ ಬಂಧನಗಳಿಗೆ ಮನಸ್ಸೇ ಕಾರಣವಾಗಿದೆ. ದ್ವಂದ್ವದಿಂದ ಮನಸ್ಸನ್ನು ಬಿಡುಗಡೆಗೊಳಿಸುವುದೇ ಮುಕ್ತಿ ಎಂದು ಅಭಿಪ್ರಾಯಪಟ್ಟರು. ಶರಣಸಂಸ್ಥಾನದ ಬಸವರಾಜಪ್ಪ ಬಾಗೋಡಿ ಅಧ್ಯಕ್ಷತೆ ವಹಿಸಿದ್ದರು. ಶಂಕ್ರಪ್ಪ ಅರುಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.