ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಮನವಿ
ಯಾದಗಿರಿ: ಜಿಲ್ಲಾದ್ಯಂತ ಕುಡಿವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ತುರ್ತು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕು. ರಾಜಾರೋಷವಾಗಿ ನಡೆಯುತ್ತಿರುವ ಕಳ್ಳಭಟ್ಟಿ ಮಾರಾಟ, ಪ್ರಾಣಿ ಬಲಿ ತಡೆಯುವಂತೆ ಟೋಕರಿ ಕೋಲಿ ಸಮಾಜ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಅವರಿಗೆ ಮನವಿ ಸಲ್ಲಿಸಿತು. ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ನೇತೃತ್ವದಲ್ಲಿ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಟೋಕರಿ ಕೋಲಿ ಕಬ್ಬಲಿಗ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅತ್ಯಂತ ಹಿಂದುಳಿದಿದ್ದಾರೆ. ಬಡ ಹಾಗೂ ಕೃಷಿ ಕೂಲಿ ಕಾರ್ಮಿಕರೇ ಆಗಿರುವುದರಿಂದ ಯಾವುದೇ ರೀತಿಯ ಪ್ರಾತಿನಿಧ್ಯ ದೊರೆಯದೇ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿಯಲು ಕಾರಣವಾಗಿದೆ. ಚುನಾವಣೆ ಸಮಯವಾಗಿರುವುದರಿಂದ ಜಿಲ್ಲೆಯಲ್ಲಿ ಕಳ್ಳಭಟ್ಟಿ ಮದ್ಯ, ಅಕ್ರಮ ಸೇಂದಿ ಮಾರಾಟ, ಜೂಜಾಟ ವ್ಯಾಪಕವಾಗಿ ನಡೆಯುತ್ತಿದೆ. ಇದರಿಂದ ಗ್ರಾಮಾಂತರ ಜನತೆ ಮೋಸ ಹೋಗಿ ದುಡಿದ ಹಣ ಇಂಥ ದುಶ್ಚಟಗಳ ಪಾಲಾಗುತ್ತಿದೆ.
ಮಧ್ಯವರ್ತಿಗಳ ನೆರವು?: ಅಪ್ರಾಪ್ತೆಯರ ಮಾರಾಟ ದಂಧೆಗೆ ಮಧ್ಯವರ್ತಿಗಳು ನೆರವಾಗುತ್ತಿದ್ದಾರೆ. ಆದ್ದರಿಂದ ಹಿಂದುಳಿದ ಜನಾಂಗಕ್ಕೆ ಅನ್ಯಾಯವಾಗುತ್ತಿರುವುದನ್ನು ತಡೆಗಟ್ಟಬೇಕು. ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಮನವಿ ಮಾಡಿದರು. ಪ್ರಭು ಕೋಡಾಲ, ರಾಘು ಗಣಪುರ, ಶಿವು ಕೊಳ್ಳಿ, ಸಾಬರಡ್ಡಿ ಬಡಿಗೇರ, ಭೀಮರಾಯ ಕಂಬಾರ ಮುದ್ನಾಳ ಇದ್ದರು.