ನಮೋಶಿ ಸೂತ್ರಕ್ಕೆ ವಿರೋಧ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮಾ.29
ಆರನೇ ವೇತನ ಆಯೋಗದ ಶ್ರೇಣಿ ಅನ್ವಯಿಸುವಲ್ಲಿನ ವಿಳಂಬ ಖಂಡಿಸಿ ಹೈಕಶಿ ಸಂಸ್ಥೆಯ ಮಹಾದೇವಪ್ಪ ರಾಂಪುರೆ ವೈದ್ಯ ವಿದ್ಯಾಲಯದ ಬೋಧಕೇತರ ಸಿಬ್ಬಂದಿ ಕಳೆದ 4 ದಿನಗಳಿಂದ ಆರಂಭಿಸಿರುವ ಮುಷ್ಕರದಿಂದಾಗಿ ವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳಿಗೆ ಗ್ರಹಣ ಹಿಡಿದಂತಾಗಿದೆ.
ಮೇ ಮೊದಲ ವಾರವೇ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳ ಪರೀಕ್ಷೆಗಳು ನಿಗದಿಯಾಗಿವೆ. ವಿದ್ಯಾರ್ಥಿಗಳೆಲ್ಲರಿಗೂ ಕಾಲೇಜಿನಲ್ಲಿರುವ ಗ್ರಂಥಾಲಯ ಸೌಕರ್ಯ ಈಗಿನ ತುರ್ತು ಅಗತ್ಯ. ಆದರೆ ಕಳೆದ 4 ದಿನಗಳಿಂದ ಕಾಲೇಜಿನ ಕಾರ್ಯಚಟುವಟಿಕೆಗಳೇ ಬಂದ್ ಆಗಿರುವುದರಿಂದ ಪರೀಕ್ಷೆಗಳನ್ನು ಎದುರಿಸಲಿರುವ ವಿದ್ಯಾರ್ಥಿಗಳು ಗ್ರಂಥಾಲಯ ಸೌಕರ್ಯದಿಂದ ವಂಚಿತರಾಗಿದ್ದಾರೆ. ಈಗಾಗಲೇ ಎಂಬಿಬಿಎಸ್ ದ್ವಿತೀಯ ವರ್ಷದ ಪ್ರವೇಶಗಳು ಶುರುವಾಗಿವೆ. ಮುಷ್ಕರ ಪ್ರವೇಶ ಪ್ರಕ್ರಿಯೆಯ ಮೇಲೂ ತನ್ನ ಪರಿಣಾಮ ಬೀರಿದ್ದರಿಂದ ಇಲ್ಲಿಯೂ ಗ್ರಹಣ ಅಮರಿಕೊಂಡಿದೆ.
ನಮೋಶಿ ಪರಿಹಾರ ಸೂತ್ರಕ್ಕೆ ಖಂಡನೆ: ತಮ್ಮ ಬೇಡಿಕೆಗಳಿಗೆ ಆಡಳಿತ ಮಂಡಳಿ ಓಕೆ ಅನ್ನದ ಹೊರತು ಮುಷ್ಕರದಿಂದ ಹಿಂದೆ ಸರಿಯಲಾಗದು ಎಂದು ನೌಕರರ ಸಂಘ ಸ್ಪಷ್ಟಪಡಿಸಿದೆ. ಹೇಗಾದರೂ ಮಾಡಿ ಪರಿಸ್ಥಿತಿ ತಿಳಿಗೊಳಿಸಬೇಕು ಎಂದು ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಶಿ ಮೊದಲ್ಗೊಂಡು ಆಡಳಿತ ಮಂಡಳಿ ಉಪಾಧ್ಯಕ್ಷ ಬಾಬುರಾವ ಮಂಗಾಣೆ ಹಾಗೂ ಸದಸ್ಯರು 3 ಬಾರಿ ಸಭೆ, ಮಾತುಕತೆ ನಡೆಸಿದ್ದರೂ ನೌಕರರ ಬಿಗಿಪಟ್ಟಿನಿಂದಾಗಿ ಮುರಿದು ಬಿದ್ದಿವೆ.
ಈಗಾಗಲೇ 1 ವರ್ಷ ವಿಳಂಬವಾಗಿರುವ 6ನೇ ವೇತನ ಶ್ರೇಣಿ ಅನ್ವಯಿಸಲು ಇನ್ನೂ ಕಾಲಾವಕಾಶ ಕೋರಿ ಅಧ್ಯಕ್ಷ ನಮೋಶಿ ಸಿದ್ಧಪಡಿಸಿದ್ದ ಪರಿಹಾರ ಸೂತ್ರವನ್ನು ಮುಷ್ಕರ ನಿರತ ನೌಕರರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ನಮೋಶಿ ಪರಿಹಾರ ಸೂತ್ರ ಯಾವ ಕಾರಣಕ್ಕೂ ಒಪ್ಪಿಕೊಳ್ಳಲಾಗದು ಎಂದು ಹೇಳಿದ್ದಾರೆ.
ಯಾಕೆ ಈ ದ್ವಂದ್ವ ನೀತಿ: ಬೋಧಕ ಸಿಬ್ಬಂದಿಗೆ ಈ ವೇತನ ಶ್ರೇಣಿ ಈಗಾಗಲೇ ಲಾಗು(ಜಾರಿ) ಮಾಡಿರುವ ಸಂಸ್ಥೆ ಅದ್ಯಾಕೆ ಬೋಧಕೇತರ ಸಿಬ್ಬಂದಿ ಬಗ್ಗೆ ಮಲತಾಯಿ ಧೋರಣೆ ಅನುಸರಿಸಬೇಕು. ಒಂದೇ ಸಂಸ್ಥೆಯಲ್ಲಿ ಈ ರೀತಿ ಭೇದ-ಭಾವಗಳು ಯಾಕೆ? ಸಂಸ್ಥೆಯ ಈ ಧೋರಣೆಯಿಂದಲೇ ತಾವು ಮುಷ್ಕರಕ್ಕಿಳಿಯುವುದು ಅನಿವಾರ್ಯವಾಯ್ತು ಎಂದು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ್ದ ರಾಂಪುರೆ ವೈದ್ಯ ವಿದ್ಯಾಲಯದ ಬೋಧಕೇತರ ನೌಕರರ ಸಂಘದ ಅಧ್ಯಕ್ಷ ಬೋದೇನಗೌಡ ಪಾಟೀಲ್ 'ಕನ್ನಡಪ್ರಭ'ಕ್ಕೆ ಹೇಳಿದ್ದಾರೆ.
ಬೋಧಕ ಸಿಬ್ಬಂದಿಗೆ 6ನೇ ವೇತನ ಶ್ರೇಣಿ ಲಾಗು ಮಾಡಿದ್ದರಿಂದ ಲಕ್ಷಾಂತರ ರುಪಾಯಿ ಆರ್ಥಿಕ ಹೊರೆ ಆಗುತ್ತಿದ್ದರೂ ಸಂಸ್ಥೆ ಅದನ್ನು ಸಹಿಸಿಕೊಂಡಿದೆ. ಬೋಧಕೇತರ ವರ್ಗಕ್ಕೆ ಅದೇ ಶ್ರೇಣಿ ಅನ್ವಯಿಸಬೇಕು ಎಂದರೆ ಆರ್ಥಿಕ ಹೊರೆಯ ಮಾತನ್ನಾಡುತ್ತಿದೆ. ಇದು ಯಾವ ಸೀಮೆ ನ್ಯಾಯ? 180 ಸಂಖ್ಯೆಯ ಬೋಧಕೇತರರಿಗೆ ಈ ವೇತನ ಶ್ರೇಣಿ ಅನ್ವಯವಾದಲ್ಲಿ ಸಂಸ್ಥೆಗೆ ಅಷ್ಟೇನು ಆರ್ಥಿಕ ಹೊರೆ ಆಗದು. ಆದರೂ ಸಂಸ್ಥೆಯ ಮಲತಾಯಿ ನಿಲುವು ನಮ್ಮನ್ನೆಲ್ಲ ದಂಗು ಬಡಿಸಿದೆ ಎಂದು ಬೋದೇನಗೌಡ ಖಾರವಾಗಿ ನುಡಿದಿದ್ದಾರೆ.
ಕಳೆದ 4 ದಿನಗಳಿಂದ ಉಪವಾಸ ಸತ್ಯಾಗ್ರಹ ಕುಳಿತಿರುವ ಗುರಣ್ಣ ಪಾಕೀನ್ ಅವರ ದೇಹಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ವೈದ್ಯರು ಇವರ ಮೇಲೆ ನಿಗಾ ಇಟ್ಟಿದ್ದಾರೆ. ರಾಂಪುರೆ ವೈದ್ಯ ವಿದ್ಯಾಲಯದಲ್ಲಿ ಮುಷ್ಕರ ಆರಂಭವಾಗಿರುವುದರಿಂದ ವಿದ್ಯಾಲಯ ವಿದ್ಯಾರ್ಥಿಗಳಿಲ್ಲದೆ, ತರಗತಿ- ಪ್ರಯೋಗಾಲಗಳು ನಡೆಯದೆ ಭಣಗುಡುತ್ತಿದೆ.
ನಮೋಶಿ ಬಂದ್ರು- ಹೋದ್ರು...: ಶುಕ್ರವಾರ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಹೈಕಶಿ ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಶಿ, ಉಪಾಧ್ಯಕ್ಷ ಬಾಬುರಾವ ಮಂಗಾಣೆ, ಕೆಲವು ಸದಸ್ಯರೊಂದಿಗೆ ರಾಂಪುರೆ ವೈದ್ಯ ವಿದ್ಯಾಲಯದ ಮುಷ್ಕರ ನಡೆದ ಸ್ಥಳಕ್ಕೆ ಭೇಟಿ ನೀಡಿದರು.
ಅಧ್ಯಕ್ಷ ನಮೋಶಿ ಬಂದಿದ್ದರಿಂದ ತಮ್ಮ ಬೇಡಿಕೆಗಳಿಗೆ ಹಸಿರು ನಿಶಾನೆ ದೊರಕಬಹುದು ಎಂದು ನೌಕರರೆಲ್ಲರೂ ಕಾತರದಿಂದ ಎದುರು ನೋಡುತ್ತಿದ್ದರೆ ನಮೋಶಿಯವರು ಅಲ್ಲಿದ್ದಷ್ಟು ಹೊತ್ತು ಮೊಬೈಲ್ ಸಂಭಾಷಣೆಯಲ್ಲಿಯೇ ಕಾಲಹರಣ ಮಾಡಿದರು. ಅಲ್ಲದೆ ಮೊಬೈಲ್ ಮಾತುಕತೆ ಮುಗಿಸಿದವರೇ ಸಂಘದ ಅಧ್ಯಕ್ಷ ಬೋದೇನಗೌಡ ಅವರನ್ನು ಕರೆದು 1 ನಿಮಿಷ ಮಾತನಾಡಿ ಜಾಗ ಖಾಲಿ ಮಾಡಿದರು.
ಹೈಕಶಿ ಆಸ್ಪತ್ರೆ ಕಾರ್ಮಿಕ ಸಂಘ ಬೆಂಬಲ: ರಾಂಪುರೆ ವೈದ್ಯ ವಿದ್ಯಾಲಯ ಸಿಬ್ಬಂದಿ ಆರಂಭಿಸಿರುವ ಮುಷ್ಕರಕ್ಕೆ ಹೈ-ಕ ಸಂಸ್ಥೆಯ ಆಸ್ಪತ್ರೆಗಳ ಕಾರ್ಮಿಕರ ಸಂಘ ಬೆಂಬಲ ಸೂಚಿಸಿದೆ. ಸಂಘದ ಅಧ್ಯಕ್ಷ ಕೆ.ಎಂ. ಬುರ್ಲೆ ಪ್ರಕಟಣೆ ನೀಡಿದ್ದು, ಸತ್ಯಾಗ್ರಹ ನಡೆದು ಇಷ್ಟೆಲ್ಲ ತೊಂದರೆಗಳು ಆದರೂ ಸಂಸ್ಥೆಯ ಅಧ್ಯಕ್ಷರಾದಿಯಾಗಿ ಸರ್ವರು ತಕ್ಷಣ ಇದಕ್ಕೆ ಸ್ಪಂದಿಸಿ ನೌಕರರ ಬೇಡಿಕೆ ಈಡೇರಿಸಬೇಕಿತ್ತು. ವಿಳಂಬ ಮಾಡದೆ ತಕ್ಷಣ ಸ್ಪಂದಿಸುವಂತಾಗಬೇಕು ಎಂದು ಬುರ್ಲೆ ತಿಳಿಸಿದ್ದಾರೆ.