ಶಿಕ್ಷಣದಿಂದ ಆರ್ಥಿಕ ಪ್ರಗತಿ ಸಾಧಿಸಿ
ಕ.ಪ್ರ. ವಾರ್ತೆ, ಯಾದಗಿರಿ, ಮಾ.29
ಗ್ರಾಮೀಣ ಭಾಗದಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಕೋಲಿ ಸಮಾಜ ಬಾಂಧವರು ಇಂತಹ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ ತಮ್ಮ ಮಕ್ಕಳಿಗೆ ಕಡ್ಡಾಯವಗಿ ಶಿಕ್ಷಣ ಕೊಡಿಸಬೇಕೆಂದು ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ ಮಟ್ಟಣ್ಣವರ ಹೇಳಿದರು.
ತಾಲೂಕಿನ ಯರಗೋಳದಲ್ಲಿ ಅಂಬಿಗರ ಚೌಡಯ್ಯ ಗ್ರಾಮೀಣಾಭಿವೃದ್ಧಿ ಸಂಘವನ್ನು ಶ್ರಮಾದಾನ ಮಾಡುವ ಮೂಲಕ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದಿಂದ ಪ್ರಗತಿ ಸಾಧಿಸಿ: ಕೋಲಿ ಸಮಾಜದವರು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಲು ಚಿಂತಿಸುವ ಅವಶ್ಯಕತೆ ಇದೆ. ಈ ಜನತೆ ಯಾವತ್ತೂ ಸ್ವಾಭಿಮಾನವನ್ನು ಬಿಟ್ಟುಕೊಟ್ಟಿಲ್ಲ. ಶಿಕ್ಷಣದಿಂದ ಮಾತ್ರ ಎಲ್ಲ ರಂಗದಲ್ಲೂ ಸುಧಾರಣೆ ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರು ಗೌರವಯುತ ಸ್ಥಾನ ಪಡೆಯಲು ಪಾಲಕರು ನಿರ್ಧಾರ ಕೈಗೊಳ್ಳಬೇಕೆಂದು ಹೇಳಿದರು.
ಸರ್ಕಾರದಿಂದ ಸಮಾಜಕ್ಕೆ ಸಿಗುವ ಸೌಲಭ್ಯಗಳಿಗಾಗಿ ಎಲ್ಲರೂ ಸಂಘಟಿತರಾಗಬೇಕಿದೆ. ಈ ನಿಟ್ಟಿನಲ್ಲಿ ಯುವ ಜನತೆ ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣ ಪಡೆದುಕೊಳ್ಳಲು ಮುಂದಾಗಬೇಕು. ಉನ್ನತ ಶಿಕ್ಷಣದ ಮೂಲಕ ಸರ್ಕಾರ ಮತ್ತು ಸಮಾಜದಲ್ಲಿ ಉತ್ತಮ ಹೆಸರು ಗಳಿಸಬೇಕು. ಸಂಘಟನೆಗಳು ಸಮಾಜದಲ್ಲಿನ ದುರ್ಬಲರ ಒಳಿತಿಗಾಗಿ ಶ್ರಮಿಸಬೇಕು. ಸಮಾಜದ ವಿದ್ಯಾವಂತ ಯುವಕರು ಶಿಕ್ಷಣದ ಮಹತ್ವದ ಬಗ್ಗೆ ತಾಲೂಕಿನಾದ್ಯಂತ ಜಾಗೃತಿ ಮೂಡಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.
ಅಮೂಲ್ಯ ಮಾರಿಕೊಳ್ಳಬೇಡಿ: ಈಗಾಗಲೇ ಚುನಾವಣೆ ದಿನಾಂಕ ಪ್ರಕಟವಾಗಿದ್ದು ಹಣ, ಹೆಂಡಕ್ಕೆ ತಮ್ಮ ಅಮೂಲ್ಯ ದ ಮತಗಳನ್ನು ಮಾರಿಕೊಳ್ಳಬಾರದು ಎಂದ ಅವರು, ಸಂಘಟನೆ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಕಿಡಿಗೇಡಿಗಳಿಂದ ದೂರವಿರುವಂತೆ ಕರೆ ನೀಡಿದರು.
ರಾಜ್ಯ ಮೀನುಗಾರಿಕಾ ಪ್ರಕೋಷ್ಠದ ಸಂಚಾಲಕ ಸಾಯಿಬಣ್ಣ ಬಸವಂತಪುರ ಮಾತನಾಡಿ, ಮೊಟ್ಟಮೊದಲ ಬಾರಿಗೆ ಅಂಬಿಗರ ಚೌಡಯ್ಯನವರ ಜನ್ಮ ದಿನಾಚರಣೆಯನ್ನು ಸರ್ಕಾರದಿಂದಲೇ ಆಚರಿಸಲು ಕ್ರಮ ಕೈಗೊಂಡಿದ್ದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಇದರಲ್ಲಿ ಮಟ್ಟಣ್ಣವರ ಶ್ರಮ ಕೂಡ ಇದೆ ಎಂದರು.
ಸಂಘದ ಶರಣಪ್ಪ ಕೋಲಕಾರ್, ನಾಗಪ್ಪ ಯರಗೋಳ, ಮರೆಪ್ಪ, ಹಣಮಂತ ದನಗಾಹಿ, ಶರಣಪ್ಪ ಇತರರು ಇದ್ದರು.