ಆಗ ಫೇಲ್ಡ್, ಈಗ ಗೋಲ್ಡ್
ರಾಯಚೂರು: ವಿದ್ಯಾರ್ಥಿ ಬದುಕಿನಲ್ಲಿ ಸಾಧಿಸುವ ಛಲವಿದ್ದರೆ ಸಾಕು ಯಾವುದೇ ಪದವಿ ಪಡೆಯುವುದು ಕಷ್ಟವಲ್ಲ ಎಂಬುದಕ್ಕೆ ಶಹಾಪುರದ ಬೀರನೂರರಿನ ಮಲ್ಲಾರೆಡ್ಡಿಯೇ ಸಾಕ್ಷಿ. ಪಿಯುಸಿ ದ್ವಿತೀಯ ಜೀವಶಾಸ್ತ್ರದಲ್ಲಿ ಫೇಲಾಗಿದ್ದಾತ ಇಂದು 6 ಚಿನ್ನದ ಪದಕ ಪಡೆದು ಸಾಧನೆ ಮೆರೆದಿದ್ದಾರೆ.
ನಗರದ ಕೃಷಿ ವಿವಿಯಲ್ಲಿ ಶನಿವಾರ ನಡೆದ ವಿವಿಯ 3ನೇ ಘಟಿಕೋತ್ಸವ ಸಮಾರಂಭದಲ್ಲಿ ಭೀಮರಾಯನಗುಡಿಯ ಕೃಷಿ ಕಾಲೇಜು ವಿದ್ಯಾರ್ಥಿಯಾದ ಮಲ್ಲಾರೆಡ್ಡಿಯದ್ದು ರೈತ ಕುಟುಂಬ. ತಂದೆ ಕೃಷಿಕರು. ಕುಟುಂಬದ ಎಲ್ಲರೂ ಕೃಷಿಯಲ್ಲಿ ಬದುಕು ಕಂಡವರು. ಹೀಗಾಗಿ ಸಹಜವಾಗಿಯೇ ಕೃಷಿ ಸಂಬಂಧಿ ಅಧ್ಯಯನದಲ್ಲಿ ಆಸಕ್ತಿಯಿತ್ತು. ಆದರೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜೀವಶಾಸ್ತ್ರ ವಿಷಯದಲ್ಲಿ ಮಲ್ಲಾರೆಡ್ಡಿ ಫೇಲಾಗಿದ್ದು ಹಿನ್ನಡೆಯಾಯಿತು. ಆದರೆ ಅವರು ಅದನ್ನು ಸವಾಲಾಗಿ ಸ್ವೀಕರಿಸಿ ಪಿಯುಸಿ ಉತ್ತೀರ್ಣಗೊಂಡು ಮುಂದೆ ಕೃಷಿ ಪದವಿ ಸೇರಿಕೊಂಡರು. ನಿರಂತರ ಅಧ್ಯಯನ, ಕುಟುಂಬದ ಬೆಂಬಲ, ಬೋಧಕ ವರ್ಗದ ಸಹಕಾರದಿಂದ 6 ಚಿನ್ನದ ಪದಕ ಪಡೆದಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಅನಿಸಿಕೆ ಹಂಚಿಕೊಂಡ ಅವರು, ಪದಕ ಪಡೆದಿದ್ದು ಸಂತಸ ತಂದಿದೆ. ಕೃಷಿಕರಿಗೆ ನೆರವಾಗುವ ಮನಸ್ಸಿದೆ. ಹೀಗಾಗಿ ಸದ್ಯ ಬೆಂಗಳೂರಿನ ಜಿಕೆವಿಕೆಯಲ್ಲಿ ಅಗ್ರಾನಮಿಯಲ್ಲಿ ಎಂಎಸ್ಸಿ ಮಾಡುತ್ತಿರುವುದಾಗಿ ತಿಳಿಸಿದರು. ಈ ಸಾಧನೆ ಮೆರೆಯುವಲ್ಲಿ ಕುಟುಂಬದವರ ಕೊಡುಗೆ ಅಪಾರ, ಮುಂದೆ ಗ್ರಾಮದಲ್ಲಿ ನೆಲೆಸಿ ಕೃಷಿಕರಿಗೆ ಸಲಹೆ ನೀಡಲು ಪ್ರಯತ್ನಿಸುವುದಾಗಿ ಹೇಳಿದರು.
ನಾಳೆ ರಾಜಕೀಯ ಪಕ್ಷಗಳ ಸಭೆ
ಯಾದಗಿರಿ: ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ವಿಧಾನಸಭೆ ಚುನಾವಣೆ ಸಂಬಂಧ ಈಗಾಗಲೇ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮಾ. 20ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಚುನಾವಣಾ ಪೂರ್ವಭಾವಿ ಸಿದ್ಧತೆ ಕುರಿತು ಹಾಗೂ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ತರುವ ಕುರಿತು ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ ಸಭೆಯನ್ನು ಏ.1ರಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದೆ.