ಕಡ್ಡಾಯ ಮತ ಚಲಾಯಿಸಿ: ಅನ್ಸಾರಿ
ಕ.ಪ್ರ. ವಾರ್ತೆ ಯಾದಗಿರಿ ಮೇ 1
ಜಗತ್ತಿನಲ್ಲೆ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು. ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಬಲಿಷ್ಠವಾಗಲು ಪ್ರತಿಯೊಬ್ಬರೂ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಬಿ. ಅನ್ಸಾರಿ ಹೇಳಿದರು.
ಅವರು ನಗರದ ಎಐಟಿಯುಸಿ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಕಾರ್ಮಿಕರು ಗುರುತಿನ ಚೀಟಿ ಪಡೆದುಕೊಳ್ಳುವುದರ ಜತೆಗೆ ಜಾಗೃತರಾಗಬೇಕು. ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳು ಜಾರಿಯಲ್ಲಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸಂಘದ ಜಿಲ್ಲಾಧ್ಯಕ್ಷ ಸೈದಪ್ಪ ಗುತ್ತೇದಾರ, ಜಿಲ್ಲಾದ್ಯಂತ ಇರುವ ಕಾರ್ಮಿಕರು ಸಂಘಟಿತರಾಗುವ ಮೂಲಕ ತಮಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಕಾರ್ಮಿಕರು ತಮ್ಮ ಮತದಾನದ ಹಕ್ಕನ್ನು ಮಾರಿಕೊಳ್ಳದೇ ಸೂಕ್ತ ವ್ಯಕ್ತಿಗೆ ಚಲಾಯಿಸುವ ಮೂಲಕ ನಿರ್ಣಾಯಕ ಪಾತ್ರ ವಹಿಸಬೇಕು ಎಂದರು.
ಇದೇ ವೇಳೆ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಕಾರ್ಮಿಕ ಸಂಘದ ತಾಲೂಕ ಅಧ್ಯಕ್ಷ ದೇವಜಿ ಜಾದವ್, ಮಲ್ಲಪ್ಪ ಹೊಸಳ್ಳಿ, ಆರ್.ಎನ್.ಶಿವರಾಜ, ರಾಜಮಹ್ಮದ, ವೆಂಕಟೇಶ ತನ್ನೀರ್, ಹಣಮಂತ, ಗೋಪಾಲ ಪವಾರ್, ಸುರೇಶ, ಬೋಜು, ವಿರುಪಣ್ಣ ನಾಯಕ, ಸಾಬಣ್ಣ, ದೇವು ಇದ್ದರು.