ಕಣದಿಂದ ಹಿಂದೆ ಸರಿದ ರಾಠೋಡ್
ಗುಲ್ಬರ್ಗ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಪಕ್ಷದಿಂದ ಸ್ಫರ್ಧಿಸಿರುವ ವೀರೇಶ ರಾಠೋಡ್ ಅವರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಶೀಲ್ ನಮೋಶಿ ಅವರಿಗೆ ಬೆಂಬಲಿಸಲು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ನಮೋಶಿ ಅವರ ಗೆಲುವಿಗೆ ತಾವು ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧರಿಸರುವುದಾಗಿ ತಿಳಿಸಿದ ರಾಠೋಡ ಅವರು, ನಮೋಶಿ ಅವರಿಗೆ ಮತದಾರರು ಮತ ನೀಡಿ ಆರಿಸಿ ಕಳುಹಿಸಬೇಕೆಂದು ಮೂಲಕ ಮನವಿ ಮಾಡಿದ್ದಾರೆ.
ಪ್ರಚಾರದಲ್ಲಿ ಕಾಣಿಸಿಕೊಳ್ಳದ ಬೈಲಪ್ಪ ನೆಲೋಗಿ: ಚರ್ಚೆ
ಕ.ಪ್ರ. ವಾರ್ತೆ, ಜೇವರ್ಗ್ಣಿ ಮೇ 1
ಜೇವರ್ಗಿ ವಿಧಾನಸಭಾ ಕ್ಷೇತ್ರದ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಬೈಲಪ್ಪ ನೆಲೋಗಿ ಅವರು ಕಳೆದೊಂದು ವಾರದಿಂದ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಕಾಣಿಸಿಕೊಳ್ಳದ ಸಂಗತಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಬೆಳವಣಿಗೆ ಕುರಿತಂತೆ ಬಿಎಸ್ಆರ್ ಕಾರ್ಯಕರ್ತರನ್ನು ಕೇಳಿದರೆ, ತಂಡ ತಂಡಗಳಲ್ಲಿ ಪ್ರಚಾರ ನಡೆಸಿದ್ದೇವೆ. ಹೀಗಾಗಿ ಬೈಲಪ್ಪನವರು ತಾವೇ ಒಂದು ತಂಡದ ನೇತೃತ್ವ ವಹಿಸಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ ಎಂಬ ಉತ್ತರ ಕೇಳಿ ಬಂತು.
ಈ ಬಗ್ಗೆ ಬೈಲಪ್ಪನವರ ಗಮನ ಸೆಳೆದಾಗ ಅವರು ತಮಗೆ ಅನಾರೋಗ್ಯ ಕಾರಣ ಪ್ರಚಾರದಲ್ಲಿ ಕಾಣಿಸಿಕೊಳ್ಳಲು ಆಗಲಿಲ್ಲ ಎಂದರು. ಪಕ್ಷದ ವಿಷಯಗಳನ್ನು ಚರ್ಚಿಸಲು ಶ್ರೀರಾಮುಲು ಅವರನ್ನು ಭೇಟಿ ಮಾಡಲು ಬಳ್ಳಾರಿಗೆ ತಾವು ಪ್ರವಾಸ ಬೆಳೆಸಿರುವುದಾಗಿ ಬೈಲಪ್ಪ ಅವರು 'ಕನ್ನಡಪ್ರಭ' ಜತೆ ಮಾತನಾಡುತ್ತ ಹೇಳಿದ್ದಾರೆ.
ಒಟ್ಟಾರೆ ಈ ಬೆಳವಣಿಗೆ ಜೇವರ್ಗಿ ಕ್ಷೇತ್ರದಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಅಹಿಂದ ಸಂಘಟನೆಯಲ್ಲಿ ಪ್ರಮುಖರಾಗಿ ಬೈಲಪ್ಪ ಅವರು ಜೇವರ್ಗಿಯಲ್ಲಿ ಗುರುತಿಸಿಕೊಂಡವರು. ತಾವು ಅಭ್ಯರ್ಥಿಯಾಗಿದ್ದುಕೊಂಡು ವಾರ ಕಾಲ ಪ್ರಚಾರದಲ್ಲಿ ಕಾಣಿಸಿಕೊಳ್ಳದ ವಿಚಾರ ಸೋಜಿಗವನ್ನುಂಟು ಮಾಡಿದೆ.