ನಗರ ಪ್ರದೇಶದಲ್ಲಿ ಮತದಾರರ ಜಾಗೃತಿ ಜಾಥಾ
ಕ.ಪ್ರ. ವಾರ್ತೆ, ಗುಲ್ಬರ್ಗ, ಮೇ.1
ಗುಲ್ಬರ್ಗ ಜಿಲ್ಲೆಯ ಎಲ್ಲ ಪುರಸಭೆ, ನಗರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಏಕಕಾಲಕ್ಕೆ ಕಡ್ಡಾಯ ಮತದಾನದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಬುಧವಾರದಂದು ಅಂಗನವಾಡಿ ಕಾರ್ಯಕರ್ತೆಯರಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ಶಹಾಬಾದ್ ಮತ್ತು ವಾಡಿ ಪಟ್ಟಣಗಳಲ್ಲಿ ಹಮ್ಮಿಕೊಂಡ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಪಲ್ಲವಿ ಆಕುರಾತಿ ಚಾಲನೆ ನೀಡಿದರು.
ಅಂಗನವಾಡಿ ಕಾರ್ಯಕರ್ತೆಯರು ಮುಂಬರುವ ಎರಡು ದಿನಗಳಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯ ಮತದಾನದ ಮಹತ್ವ ಹಾಗೂ ವಿದ್ಯುನ್ಮಾನ ಮತಯಂತ್ರದ ಮೂಲಕ ಮತದಾನ ಮಾಡುವ ವಿಧಾನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳುವರು. ಗುಲ್ಬರ್ಗ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರಗಳಲ್ಲಿ ಈ ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಪ್ರತಿಶತ ಮತದಾನವಾದ ಪ್ರದೇಶಗಳಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಗುರುವಾರದಿಂದ ಪ್ರಾರಂಭವಾಗಲಿದೆ. ಇದೇ ಸಂದರ್ಭದಲ್ಲಿ ಶಹಾಬಾದ್ ಅಲ್‌ಟ್ರ್ಸಂ ಕಂಪನಿಯ ಕಾರ್ಮಿಕರು ಕಾರ್ಮಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾದಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷೆ ಪಲ್ಲವಿ ಆಕುರಾತಿ ಭಾಗವಹಿಸಿ ಕಡ್ಡಾಯ ಮತದಾನದ ಮಹತ್ವ ಕುರಿತು ವಿವರಿಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರತ್ನಾ ಬಿ. ಕಲಂದಾನಿ, ಶಹಾಬಾದ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವಿ ರತ್ನಾಕರ್, ಮೇಲ್ವಿಚಾರಕಿಯರಾದ ಸಂಗಮ್ಮ, ಸುಲೋಚನಾ, ಮೀನಾಕ್ಷಿ, ಶಕುಂತಲಾ, ನೇತ್ರಾವತಿ, ನಾಗಮ್ಮ, ಸರ್ನಾ ಹಾಗೂ ವಾಡಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಪಟ್ಟೇದಾರ ಇತರರು ಭಾಗವಹಿಸಿದ್ದರು.
--