ವಕೀಲರ ಸಂಘಕ್ಕೆ ನೇಮಕ
ಶಹಾಪುರ: ವಕೀಲರ ಸಂಘದಲ್ಲಿ ಈಚೆಗೆ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಘದ ಅಧ್ಯಕ್ಷರನ್ನಾಗಿ ಆರ್.ಎಂ.ಹೊನ್ನಾರೆಡ್ಡಿ, ಉಪಾಧ್ಯಕ್ಷರನ್ನಾಗಿ ಎಂ.ಎಸ್.ರಾಂಪುರೆ, ಕಾರ್ಯದರ್ಶಿಯನ್ನಾಗಿ ಕಲ್ಲಪ್ಪ ಸಿ.ಆನೇಗುಂದಿ, ಉಪಕಾರ್ಯದರ್ಶಿಯನ್ನಾಗಿ ನಜಮಾ ಬೇಗಂ ಹಾಗೂ ಖಜಾಂಚಿಯನ್ನಾಗಿ ಹಾಜೀಬಾಬ ಅವರನ್ನು 2013-14ನೇ ಸಾಲಿಗಾಗಿ ಆಯ್ಕೆ ಮಾಡಲಾಯಿತೆಂದು ಸಂಘದ ನೂತನ ಕಾರ್ಯದರ್ಶಿ ತಿಳಿಸಿದ್ದಾರೆ.
ಕೆಜೆಪಿ ಕಾಂಗ್ರೆಸ್ ಒಳ ಒಪ್ಪಂದ: ಕಂದಕೂರ
ಗುರುಮಠಕಲ್: ಗುರುಮಠಕಲ್ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಕೆಜೆಪಿ ಒಳಒಪ್ಪಂದ ಮಾಡಿಕೊಂಡು ಜನತೆಗೆ ಮೋಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಆರೋಪಿಸಿದಾರೆ. ಅವರು ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 2008ರ ಚುನಾವಣೆಯಲ್ಲಿ ಜೆಡಿಎಸ್ ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಈಗಿನ ಕೆಜೆಪಿ ಅಭ್ಯರ್ಥಿ ಒಳ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಈ ಬಾರಿ ಕೆಜೆಪಿಯಿಂದ ಸ್ಫರ್ಧಿಸಿರುವ ಅಭ್ಯರ್ಥಿ ಮತ್ತೊಮ್ಮೆ ಕಾಂಗ್ರೆಸ್ ಜತೆ ಒಪ್ಪಂದ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಈ ಬಗ್ಗೆ ನಾನು ಎಲ್ಲಿ ಬೇಕಾದರೂ ಪ್ರಮಣ ಮಾಡಲು ಸಿದ್ದ. 2008ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾಂಗ್ರೆಸ್ ಜತೆ ಒಪ್ಪಂದ ಮಾಡಿಕೊಂಡಿಲ್ಲ ಎಂದು ಅವರು ಪ್ರಮಾಣ ಮಾಡಲು ಎಂದು ಸವಾಲು ಹಾಕಿದರು. ಬಾಬುರಾವ ಚಿಂಚನಸೂರ 5 ವರ್ಷದಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಲಿಲ್ಲ. ಕ್ಷಮಿಸಿ, ಇನ್ನು ಮುಂದೆ ಅವರ ಕಿವಿ ಹಿಂಡಿ ಕೆಲಸ ಮಾಡಿಸುತ್ತೇನೆ ಎಂದು ಖರ್ಗೆ ಈಚೆಗೆ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ. ಅಂದರೆ ಶಾಸಕರು ತಪ್ಪು ಮತ್ತು ಭ್ರಷ್ಟಚಾರ ಮಾಡಿದ್ದಾರೆಂದು ಕಾಂಗ್ರೆಸ್ ಒಪ್ಪಿಕೊಂಡಂತಾಗಿದೆ. ಇದನ್ನು ನೋಡಿಯೂ ಖರ್ಗೆ ಏಕೆ ಸುಮ್ಮನೆ ಕುಳಿತಿದ್ದಾರೆ. ಚುನಾವಣೆ ಬಂದಾಗ ಮಾತ್ರ ಇವರಿಗೆ ಕ್ಷೇತ್ರದ ನೆನಪಾಗುತ್ತದೆ ಎಂದು ಟೀಕಿಸಿದರು. ಜಿ.ತಮ್ಮಣ, ನವಾಜರೆಡ್ಡಿ ಚಪೆಟ್ಲಾ, ಮಸಿಯುದ್ದೀನ್ ಆಸೀಮ, ವೆಂಕಟೇಶ ಹೂಗಾರ, ನರಸಪ್ಪ ವಕೀಲರು, ರವೀಂದ್ರ ರೆಡ್ಡಿ ಪಾಟೀಲ್, ನಾಗೇಂದ್ರ ಚೌದ್ರಿ, ಶಕೀಲ ಅಹ್ಮದ, ದಾವಲಸಾಬ್ ಇದ್ದರು.
'ಕಾಂಗ್ರೆಸ್‌ನಿಂದ ಸುಭದ್ರ ಸರ್ಕಾರ'
ಹುಣಸಗಿ: ಸುರಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ರೋಡ್ ಶೋ ನಡೆಸಿ ಬುಧವಾರ ಮತ ಯಾಚಿಸಿದರು. ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಲೆ ಇದೆ. ಬಿಜೆಪಿ ಸರ್ಕಾರದ ಆಡಳಿತ ನೋಡಿ ಮತದಾರ ನಾವು ಕಳೆದ ಬಾರಿ ಬಿಜೆಪಿಗೆ ಮತ ನೀಡಿ ತಪ್ಪು ಮಾಡಿದ್ದೇವೆ ಎಂದು ಪಶ್ಚಾತ್ತಾಪ ಪಡುತ್ತಿದ್ದಾನೆ. ಕೇಂದ್ರ ಸರ್ಕಾರದ ನೆರವಿನಿಂದ ರಾಜ್ಯದಲ್ಲಿ ಅದರಲ್ಲಿಯೂ ಹೈದರಾಬಾದ್ ಕರ್ನಾಟಕಕ್ಕೆ ನ್ಯಾಯ ಕೊಡಿಸುವ ಎಲ್ಲ ಪ್ರಯತ್ನ ಮಾಡಿದೆ. ಈಗಾಗಲೆ 200 ಕೋಟಿ ರು.ಗಳನ್ನು ನವೀಕರಣಕ್ಕೆ ಅನುದಾನ ನೀಡಿ ಕಾಮಗಾರಿ ಮುಕ್ತಾಯ ಮಾಡಲಾಗಿದೆ. ಈ ಬಾರಿ ಕಾಲುವೆ ಕುಸಿತದ ಒಂದು ಪ್ರಕರಣಗಳೂ ಇಲ್ಲಾ. ಇದು ಕೇಂದ್ರ ಸರ್ಕಾರದ ಸಾಧನೆಯಾಗಿದ್ದು, ಕ್ಷೇತ್ರದಲ್ಲೂ ಪಕ್ಷ ಬಹುಮತದಿಂದ ಗೆಲ್ಲಲಿದೆ ಎಂದು ರಾಜಾ ವೆಂಕಟಪ್ಪ ನಾಯಕ ಹೇಳಿದರು.