ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸೋನಿಯಾ ಭೇಟಿ: ಸಂಚಾರ ಮಾರ್ಪಾಟು

Lingaraj Badiger
Updated On : 2 May 2013, 11:26 am

ಗುಲ್ಬರ್ಗ: ದಿನಾಂಕ 2 ಮೇ, 2013ರ ಬುಧವಾರ ಗುಲ್ಬರ್ಗ ಮಹಾನಗರಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಪಕ್ಷದ ವತಿಯಿಂದ ವಿಧಾನಸಭಾ ಚುನಾವಣೆ ಪ್ರಚಾರ, ತಮ್ಮ ಅಭ್ಯರ್ಥಿಗಳ ಪರ ಮತ ಯಾಚನೆಗೆ ಆಗಮಿಸುತ್ತಿದ್ದಾರೆ. ಅವರ ಜೊತೆ ಅನೇಕ ಗಣ್ಯರು ಆಗಮಿಸುತ್ತಿರುವುದರಿಂದ ಭದ್ರತಾ ದೃಷ್ಟಿಯಿಂದ ಮೇ 2ರ ಬುಧವಾರ ಬೆಳಿಗ್ಗೆ 8 ರಿಂದ ಮ. 2ರವರೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ (ಜಿಜಿಎಚ್) ವೃತ್ತದಿಂದ ಹಳೆ ಡಿಪಿಓವರೆಗಿನ ರಸ್ತೆ ಹಾಗೂ ಜಗತ್ ವೃತ್ತದಿಂದ ಗೋವಾ ಹೊಟೇಲ್ ಹಾಗೂ ಧರ್ಮಸಿಂಗ್ ಮನೆವರೆಗೆ ಇರುವ ರಸ್ತೆಯನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಸಂಪೂರ್ಣ ನಿಷೇಧಿಸಲಾಗಿದೆ. ಸಾರ್ವಜನಿಕರಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಲು ಜಿಲ್ಲಾ ಎಸ್ಪಿ ಸತೀಶ ಕುಮಾರ್ ಕೋರಿದ್ದಾರೆ.
ನಮೋಶಿ ವಿರುದ್ಧ ಕ್ರಮಕ್ಕೆ ಆಗ್ರಹ
ಗುಲ್ಬರ್ಗ: ಗುಲ್ಬರ್ಗ ಮಹಾನಗರ ಪಾಲಿಕೆ ಸದಸ್ಯರಾಗಿರುವ ತಮ್ಮ ಮಗ ಸಿದ್ದಾರ್ಥ ಪಟ್ಟೇದಾರಗೆ ಹಣದ ಆಮಿಷಮೊಡ್ಡಿ ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಂಡು ತಮಗೆ ಸೋಲಿಸಲು ವ್ಯವಸ್ಥಿತ ಸಂಚು ರೂಪಿಸಿರುವ ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಶೀಲ್ ನಮೋಶಿ ವಿರುದ್ಧ ಕ್ರಮ ಜರುಗಿಸಬೇಕೆಂದು ಕ್ಷೇತ್ರದ ಪತ್ಯೇತರ ಅಭ್ಯರ್ಥಿ ಗುರುಶಾಂತ ಪಟ್ಟೇದಾರ ಮನವಿ ಮಾಡಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವ ಅವರು, ತಾನು ಪಕ್ಷೇತರ ಅಭ್ಯರ್ಥಿಯಾಗಿ ಗುಲ್ಬರ್ಗ ದಕ್ಷಿಣ ಕ್ಷೇತ್ರಕ್ಕೆ ಸ್ಪರ್ಧಿಸಿರುವೆ. ಇದೇ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಶಶೀಲ್ ನಮೋಶಿ ಅವರು ತಮ್ಮ ಮುಗ್ದ ಮಗನಿಗೆ ಹಣ ನೀಡಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ತಮ್ಮನ್ನು ಸೋಲಿಸುವ ಯೋಜನೆ ರೂಪಿಸಿದ್ದಾರೆಂದು ತಿಳಿಸಿದ್ದಾರೆ. ಈ ಕುರಿತು ವಿಚಾರಿಸಲು ಹೋದ ತಮಗೆ ನಮೋಶಿ ಅವರು ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ್ದಾರೆ. ಕೂಡಲೇ ನಮೋಶಿ ಅವರು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್‌ಗೆ ದಲಿತ ಪ್ಯಾಂಥರ್ ಬೆಂಬಲ
ಚಿತ್ತಾಪುರ: ಜ್ಯಾತ್ಯಾತೀತ ಮನೋಭಾವನೆ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ಮನೋಭಾವ ಹೊಂದಿರುವ ಕಾಂಗ್ರೆಸ್ ಎಲ್ಲರನ್ನು ತನ್ನ ಜತೆ ತೆಗೆದುಕೊಂಡು ಹೋಗುವ ಶಕ್ತಿ ಹೊಂದಿದೆ. ಹೀಗಾಗಿ ನಮ್ಮ ಸಂಘಟನೆಯು ರಾಜ್ಯದಲ್ಲಿ ಒಂದು ಸುಭದ್ರ ಸರ್ಕಾರಕ್ಕಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ನಿರ್ಣಯಿಸಲಾಗಿದೆ ಎಂದು ರಾಜ್ಯ ದಲಿತ ಪಾಂಥರ್ ಅಧ್ಯಕ್ಷ ಮಲ್ಲಪ್ಪ ಹೊಸ್ಮನಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಳೆದ ಐದು ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಕಚ್ಚಾಟದಲ್ಲಿ ಮೂರು ಬಣಗಳಲ್ಲಿ ಗುರುತಿಸಿಕೊಂಡು ಜನರಿಗೆ ಮೋಸ ಮಾಡಲು ಹೊರಟಿದೆ. ಈ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರ ಮೂರು ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿ ಸುಭದ್ರ ಸರ್ಕಾರ ಬರುವಂತೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement