ಮಗನ ಮೇಲೆ ಆಣೆ ಮಾಡಿ ಮುದ್ನಾಳ ಪ್ರಮಾಣ
ಗುರುಮಠಕಲ್: ಮತದಾನದ ದಿನ ಹತ್ತಿರವಾದಂತೆ ನಾಟಕೀಯ ಬೆಳವಣಿಗೆಗಳೂ ಕ್ಷೇತ್ರದಲ್ಲಿ ಕಾಣುತ್ತಿವೆ. ರಾಜ್ಯ ರಾಜಕಾರಣಕ್ಕೆ ಮಾತ್ರ ಸಿಮಿತವಾಗಿದ್ದ ಆಣೆ, ಪ್ರಮಾಣಗಳು ಕ್ಷೇತ್ರಕ್ಕೂ ಕಾಲಿಟ್ಟಿದೆ. ಯಡಿಯೂರಪ್ಪ, ಕುಮಾರಸ್ವಾಮಿಯರ ಆಣೆ ಪದ್ಧತಿ ಈ ಗುರುಮಠಕಲ್ನಲ್ಲಿ ಕೆಜೆಪಿ ಮತ್ತು ಜೆಡಿಎಸ್ ನಡುವೆ ನಡೆದಿದೆ. ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ವೇಳೆ ಈಗಿನ ಕೆಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಅವರು ಕಾಂಗ್ರೆಸ್ ಜತೆ ಒಳ ಒಪ್ಪಂದ ಮಾಡಿಕೊಂಡು ಹಣ ಪಡೆದಿದ್ದರು ಎಂದು ಜೆಡಿಎಸ್ನ ಶರಣಗೌಡ ಕಂದಕೂರ ಬುಧವಾರ ಆರೋಪಿಸಿದ್ದರು. ಇದು ಸುಳ್ಳಾದರೆ ಮಗನ ಮೇಲೆ ಪ್ರಮಾಣ ಮಾಡಿ ಹೇಳುವಂತೆ ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿದ ವೆಂಕಟರೆಡ್ಡಿ ಮುದ್ನಾಳ ಗುರುವಾರ ತಮ್ಮ ಮಗ ಮಹೇಶನ ಮೇಲೆ ಕೈ ಇಟ್ಟು ತಾವು ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಿದರು. ನಂತರ ಮಾತನಾಡಿದ ಮುದ್ನಾಳ, ಶರಣಗೌಡನೊಬ್ಬ ಬಚ್ಚಾ. ತನ್ನ ತಂದೆಯ ಸೋಲಿನ ಭೀತಿಯಲ್ಲಿ ಮಾನಸೀಕ ಸ್ಥಿಮಿತ ಕಳೆದುಕೊಂಡು ಮುದ್ನಾಳ ಕುಟುಂಬದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.