ನೀತಿ ಸಂಹಿತೆ ಉಲ್ಲಂಘನೆಯ 81 ಪ್ರಕರಣ ದಾಖಲು
ಗುಲ್ಬರ್ಗ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ನಡೆಯುವ ಚುನಾವಣೆಯ ಪ್ರಯುಕ್ತ ಏ.5ರಿಂದ ಮೇ 3ರ ವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಒಟ್ಟು 81 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮೇ 3ರಂದು ನೀತಿ ಸಂಹಿತೆ ಉಲ್ಲಂಘನೆಯ 7 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ತಿಳಿಸಿದ್ದಾರೆ. ವಿಧಾನಸಭಾವಾರು ಈವರೆಗೆ ದಾಖಲಾದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ವಿವರ ಇಂತಿದೆ. ಅಫಜಲ್ಪುರ-7, ಜೇವರ್ಗಿ-14, ಚಿತ್ತಾಪುರ(ಎಸ್ಸಿ)-2, ಸೇಡಂ-12, ಚಿಂಚೋಳಿ(ಎಸ್ಸಿ)-8, ಗುಲ್ಬರ್ಗ ಗ್ರಾಮೀಣ(ಎಸ್ಸಿ)-8, ಗುಲ್ಬರ್ಗ ದಕ್ಷಿಣ-20, ಗುಲ್ಬರ್ಗ ಉತ್ತರ-7, ಆಳಂದ-3. ಮೇ 3 ಂದು ನೀತಿ ಸಂಹಿತೆ ಉಲ್ಲಂಘನೆಯ 7 ಪ್ರಕರಣಗಳನ್ನು ದಾಖಲಿಸಲಾಗಿದ್ದು, ವಿವರ ಇಂತಿದೆ. ಅಫಜಲ್ಪುರ ಮತಕ್ಷೇತ್ರ ವ್ಯಾಪ್ತಿಯ ಅಫಜಲ್ಪುರದ ಗುಲ್ಲಾ ಪಟೇಲ್ ಮನೆಯಲ್ಲಿ ಪರವಾನಗಿ ಇಲ್ಲದೇ ಅಕ್ರಮವಾಗಿ ದಾಸ್ತಾನು ಮಾಡಿದ್ದ 6 ಪೆಟ್ಟಿಗೆ ಮದ್ಯವನ್ನು ವಶಪಡಿಸಿಕೊಂಡು ಮನೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೇವರ್ಗಿ ಮತಕ್ಷೇತ್ರ ವ್ಯಾಪ್ತಿಯ ಕಟ್ಟಿ ಸಂಗಾವಿ ಗ್ರಾಮದ ಹತ್ತಿರ ಪರವಾನಗಿಯಿಲ್ಲದ ವಾಹನದಲ್ಲಿ ಸಾಗಿಸುತ್ತಿದ್ದ 230 ಓರಿಜಿನಲ್ ಚಾಯ್ಸ್ ಮದ್ಯದ ಬಾಟಲಿಗಳನ್ನು ವಾಹನ ಸಮೇತ ವಶಪಡಿಸಿಕೊಂಡು ಜೇವರ್ಗಿ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ವಾಹನ ಚಾಲಕ ಮಲ್ಲಿಕಾರ್ಜುನ ಅಬ್ಬೆತುಮಕೂರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೇಡಂ ಮತಕ್ಷೇತ್ರದ ಪಟ್ಟಣದ ಪಂಚಲಿಂಗೇಶ್ವರ ದೇವಸ್ಥಾನದ ಹತ್ತಿರ ಮೇ 2ರಂದು ಸುಮಾರು 200 ಜನರಿಗೆ ಊಟದ ವ್ಯವಸ್ಥೆ ಮಾಡಿಸಿದ್ದಕ್ಕಾಗಿ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೇಲ್ಕೂರ ವಿರುದ್ಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೆ ಸದರಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ 12 ಲೀ. ಸ್ಥಳೀಯ ಅಕ್ರಮ ಮದ್ಯವನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಚಿಂಚೋಳಿ ಮತಕ್ಷೇತ್ರ ವ್ಯಾಪ್ತಿಯ ಕೊಂಚಾವರಂ ಪ್ರದೇಶದಲ್ಲಿ ಕೆಜೆಪಿ ಅಭ್ಯರ್ಥಿ ಪ್ರತಿ ಮತದಾರರಿಗೆ ಮನೆ-ಮನೆಗೆ ತೆಂಗಿನ ಕಾಯಿಗಳನ್ನು ವಿತರಿಸುತ್ತಿದ್ದ ಪ್ರಯುಕ್ತ ಕೆಜೆಪಿ ಅಭ್ಯರ್ಥಿಯ ವಿರುದ್ಧ ಕೊಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮದ್ಯದ ಬಾಟಲಿಗಳು ವಶ; ದೂರು
ಗುಲ್ಬರ್ಗ: ನಗರದ ಖರ್ಗೆ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ಮಧ್ಯಾಹ್ನ ಓಮಿನಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯದ ಬಾಟಲಿಗಳನ್ನು ಜಪ್ತಿ ಮಾಡಿಕೊಂಡು ಮೂರು ಜನರನ್ನು ಬಂಧಿಸಿದ್ದಾರೆ. ರಾಕೇಶ ತಂದೆ ಮುರುಗೇಶ ಮುತ್ತಂಗಿ, ಗುಂಡಪ್ಪ ತಂದೆ ಬಸವಣ್ಣಪ್ಪ ಫರತಾಬಾದ್, ಪುಂಡಲಿಕ ತಂದೆ ರುಕ್ಮಣ್ಣ ಗಾಯಕವಾಡ ಎಂಬುವುರನ್ನು ಬಂಧಿಸಿ ಅವರಿಂದ ಕಾರು, 60 ಸಾವಿರ ಮೌಲ್ಯದ ಮದ್ಯದ ಬಾಟಲಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಗುಲ್ಬರ್ಗ ಗ್ರಾಮೀಣ ಉಪ ವಿಭಾಗದ ಡಿಎಸ್ಪಿ ಮಾರ್ಗದರ್ಶನದಲ್ಲಿ ಎಂ.ಬಿ. ನಗರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಮಂತ ಇಲ್ಲಾಳ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಈ ಕುರಿತು ಎಂ.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.