ಮತಗಟ್ಟೆ ಸೇರಿದ ಮತಯಂತ್ರ, ಸಿಬ್ಬಂದಿ
ಕನ್ನಡಪ್ರಭ ವಾರ್ತೆ, ಯಾದಗಿರಿ, ಮೇ 4
ವಿಧಾನಸಭಾ ಚುನಾವಣೆಗೆ ಭಾನುವಾರ ಮತದಾನ ಪ್ರಕ್ರಿಯೆ ನಡೆಯಲಿರುವ ಹಿನ್ನೆಲೆಯಲ್ಲಿ ನಿಯೋಜಿತ ಸಿಬ್ಬಂದಿ ಶನಿವಾರ ಮಸ್ಟರಿಂಗ್ ಕೇಂದ್ರಗಳಿಂದ ಮತಯಂತ್ರ ಹಾಗೂ ಅಗತ್ಯ ಸಾಮಗ್ರಿಗಳನ್ನು ಪಡೆದು ಮತಗಟ್ಟೆಗಳಿಗೆ ತೆರಳಿದರು.
ಯಾದಗಿರಿ ಹಾಗೂ ಗುರುಮಠಕಲ್ ವಿಧಾನಸಭಾ ಕ್ಷೇತ್ರಗಳಿಗೆ ನಗರದ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ಮಸ್ಟರಿಂಗ್ ಕೇಂದ್ರ ತೆರೆಯಲಾಗಿತ್ತು. ಎರಡೂ ಕ್ಷೇತ್ರಗಳ ಮತಗಟ್ಟೆಗೆ ನಿಯೋಜಿತವಾಗಿರುವ ಸಿಬ್ಬಂದಿ ಶನಿವಾರ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತಯಂತ್ರ ಹಾಗೂ ಇನ್ನಿತರ ಸಾಮಗ್ರಿಗಳನ್ನು ಪಡೆದರು.
ಪರಿಶೀಲನೆ: ನಂತರ ತಮಗೆ ನೀಡಿದ ಮತಯಂತ್ರದಲ್ಲಿ ಯಾವುದೇ ತಾಂತ್ರಿಕ ತೊಂದರೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಯೋಜಿತ ಸಿಬ್ಬಂದಿ ಪರಿಶೀಲಿಸಿಕೊಂಡರು. ಅಲ್ಲದೇ ಮತದಾರರ ಬೆರಳಿಗೆ ಗುರುತು ಹಾಕುವ ಶಾಯಿ, ಮತದಾರರ ಪಟ್ಟಿ, ಗುಪ್ತ ಮತದಾನಕ್ಕೆ ಅನುಕೂಲವಾಗುವಂತೆ ಮತಯಂತ್ರದ ಸುತ್ತ ಇಡುವ ರಟ್ಟು ಇತ್ಯಾದಿ ಸಲಕರಣೆಗಳನ್ನು ಮಸ್ಟರಿಂಗ್ ಕೇಂದ್ರದಲ್ಲಿ ಪಡೆದರು.
ಯಾದಗಿರಿ ಹಾಗೂ ಗುರುಮಠಕಲ್ ಕ್ಷೇತ್ರಗಳ ಮತಗಟ್ಟೆಗಳಿಗೆ ನಿಯೋಜಿತವಾಗಿರುವ ಸಾವಿರಾರು ಸಿಬ್ಬಂದಿ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ್ದರು. ಇದರಿಂದ ಆವರಣ ತುಂಬಿಹೋಗಿತ್ತು.
ಸಿಬ್ಬಂದಿಯೊಂದಿಗೆ ಮಕ್ಕಳು: ಶಹಾಪುರ ಹಾಗೂ ಸುರಪುರ ತಾಲೂಕಿನ ಸಿಬ್ಬಂದಿಯನ್ನು ಯಾದಗಿರಿ ಹಾಗೂ ಗುರುಮಠಕಲ್ ಕ್ಷೇತ್ರದ ಮತಗಟ್ಟೆಗಳಿಗೆ ನೇಮಿಸಲಾಗಿತ್ತು. ಧ್ವನಿವರ್ಧಕದಲ್ಲಿ ಹೆಸರು ಕೂಗುತ್ತಿದ್ದಂತೆ ಮತಯಂತ್ರಗಳನ್ನು ಪಡೆಯಲು ಸಿಬ್ಬಂದಿ ಧಾವಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪುಟ್ಟ ಮಕ್ಕಳನ್ನು ಕರೆತಂದ ಮಹಿಳಾ ಸಿಬ್ಬಂದಿಯೂ ಇದ್ದರು.
ಮಸ್ಟರಿಂಗ್ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್, ಎಸ್ಪಿ ವಂಶಿಕೃಷ್ಟ, ಉಪವಿಭಾಗಾಧಿಕಾರಿ ಬಿ.ಪಿ. ವಿಜಯ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದು, ಸುಸೂತ್ರವಾಗಿ ಪ್ರಕ್ರಿಯೆ ನಡೆಯುವಂತೆ ನೋಡಿಕೊಂಡರು. ಜಿಲ್ಲಾ ಕ್ರೀಡಾಂಗಣದಲ್ಲಿ ಮತಗಟ್ಟೆಗೆ ಸಿಬ್ಬಂದಿ ಕರೆದೊಯ್ಯಲು ನೂರಾರು ವಾಹನಗಳು ಸಿದ್ಧಗೊಂಡಿದ್ದವು. ಆಯಾ ಮಾರ್ಗಕ್ಕೆ ಸಂಬಂಧಪಟ್ಟ ವಾಹನದ ಮೂಲಕ ಸಿಬ್ಬಂದಿ ಮತಗಟ್ಟೆಗೆ ತೆರಳಿದರು. ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಸಿಬ್ಬಂದಿ ಪರದಾಡುವಂತಾಯಿತು.
ಭದ್ರತೆ: ಸಶಸ್ತ್ರ ಮೀಸಲು ಪಡೆ, ಪೊಲೀಸ್, ಗೃಹರಕ್ಷಕ ಸಿಬ್ಬಂದಿ ಮತಯಂತ್ರದೊಂದಿಗೆ ತೆರಳಿದರು. ಮಸ್ಟರಿಂಗ್ ಕೇಂದ್ರದಲ್ಲೂ ಭದ್ರತಾ ಸಿಬ್ಬಂದಿ ಹೆಜ್ಜೆಹೆಜ್ಜೆಗೂ ಕಾಣುತ್ತಿದ್ದರು. ಬೆಳಗ್ಗೆಯಿಂದ ಆರಂಭವಾದ ಪ್ರಕ್ರಿಯೆ ಸಂಜೆ ವೇಳೆಗೆ ಮುಕ್ತಾಯಗೊಂಡಿದ್ದು, ದೂರದ ಮತಗಟ್ಟೆಗಳಿಗೆ ತೆರಳುವ ವಾಹನಗಳನ್ನು ಮೊದಲು ಬಿಡಲಾಯಿತು. ಇದರಿಂದ ಸಂಜೆ 6ರ ವೇಳೆಗೆ ಸಿಬ್ಬಂದಿ ತಮಗೆ ನಿಯೋಜಿಸಿದ ಮತಗಟ್ಟೆಗಳನ್ನು ಸೇರಿದರು.
ಶಹಾಪುರದ ಬೇವಿನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಹಾಗೂ ಸುರಪುರದಲ್ಲಿ ಪ್ರಭು ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ಜರುಗಿತು.