ಮಸ್ಟರಿಂಗ್ ಕಾರ್ಯ ಸುಸೂತ್ರ
ಶಹಾಪುರ: ವಿಧಾನಸಭಾ ಚುನಾವಣೆಯಲ್ಲಿ ಭಾನುವಾರ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಇಲ್ಲಿಯ ಬೇವಿನಹಳ್ಳಿ ಮೊರಾರ್ಜಿ ಶಾಲೆಯ ಮಸ್ಟರಿಂಗ್ ಕೇಂದ್ರದಿಂದ ನಿಯೋಜಿತ ಸಿಬ್ಬಂದಿ ಮತಯಂತ್ರಗಳೊಂದಿಗೆ ಆಯಾ ಮತಗಟ್ಟೆಗಳಿಗೆ ತೆರಳಿದ್ದಾರೆ. ಮಸ್ಟರಿಂಗ್ ಕಾರ್ಯ ಸುಸೂತ್ರವಾಗಿ ನಡೆದಿದ್ದು, ಮತದಾನಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ನಿಯೋಜಿತ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ಶನಿವಾರ ಮತಯಂತ್ರ ಹಾಗೂ ಇತರ ಸಾಮಗ್ರಿಗಳನ್ನು ಪಡೆದರು. ಸಂಜೆ ವೇಳೆಗೆ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ಆಯಾ ಮತಗಟ್ಟೆ ಸೇರಿದ್ದಾರೆ. ಶಹಾಪುರ ಕ್ಷೇತ್ರಕ್ಕೆ ಒಟ್ಟು 1083 ಸಿಬ್ಬಂದಿ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ್ದು, 300 ಪ್ಯಾರಾ ಮಿಲಿಟರಿ ಪಡೆ ಸಿಬ್ಬಂದಿ, ಸ್ಥಳೀಯ ಪೊಲೀಸರು, ಗೃಹರಕ್ಷಕರು ಭದ್ರತೆಗಿದ್ದಾರೆ. ಒಟ್ಟು 30 ಬಸ್ಸು, 32 ಜೀಪ್ ವ್ಯವಸ್ಥೆಗೊಳಿಸಲಾಗಿತ್ತು. ಮತಕ್ಷೇತ್ರದಲ್ಲಿ ಒಟ್ಟು 221 ಮತಗಟ್ಟೆಗಳಿದ್ದು, 20 ಸೂಕ್ಷ್ಮ, 40 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಎಲ್ಲೆಡೆ ವ್ಯಾಪಕ ಬಂದೋಬಸ್ತ್ ಕಲ್ಪಿಸಲಾಗಿದೆ. ಚುನಾವಣಾ ಅಧಿಕಾರಿ ಜಿಯಾವುಲ್ ಹಕ್ ಅವರು ಸಿಬ್ಬಂದಿ ವರ್ಗದ ಸಹಕಾರದಿಂದ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಪ್ರತಿ ಮತಕೇಂದ್ರಗಳಲ್ಲಿ ಸುಸೂತ್ರ ಮತದಾನ ನಡೆಯಲು ಎಲ್ಲಾ ರೀತಿಯ ವ್ಯವಸ್ಥೆ ಸಜ್ಜುಗೊಳಿಸಲಾಗಿದೆ.