ಸಿಬ್ಬಂದಿ ಪರದಾಟ
ಕನ್ನಡಪ್ರಭ ವಾರ್ತೆ, ಜೇವರ್ಗಿ, ಮೇ 4
ಮತಕ್ರೇತ್ರದ ವಿಧಾನಸಭೆ ಚುನಾವಣೆಗೆ ನಿಯೋಜಿಸಿದ ಸಿಬ್ಬಂದಿಗೆ ಚುನಾವಣಾಧಿಕಾರಿಗಳು ಯಾವುದೇ ಸೌಲಭ್ಯ ನೀಡದ ಕಾರಣ ಪರದಾಡುವಂತಾಗಿದೆ.
ಭಾನುವಾರ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಬೇರೆ ತಾಲೂಕುಗಳಿಂದ ಜೇವರ್ಗಿ ಕ್ಷೇತ್ರಕ್ಕೆ ನಿಯೋಜನೆಗೊಂಡ 140 ಕಾಯ್ದಿರಿಸಿದ ಸಿಬ್ಬಂದಿಗಳಿಗೆ ಶನಿವಾರ ಬೆಳಗ್ಗೆಯಿಂದ ಸಂಜೆ 7ರವರೆಗೆ ಕುಡಿಯುವ ನೀರು, ಆಹಾರ, ಶೌಚಾಲಯಗಳ ವ್ಯವಸ್ಥೆ ಕಲ್ಪಿಸದಿರುವುದರಿಂದ ಸಿಬ್ಬಂದಿ ಸಂಜೆ 7.30ರ ಸುಮಾರಿಗೆ ತಾಳ್ಮೆ ಕಳೆದುಕೊಂಡು ತಹಸೀಲ್ದಾರ್ ಕಚೇರಿ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದರು.
ಪಟ್ಟಣದ ಹೊರ ವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕುಡಿವ ನೀರಿನ ವ್ಯವಸ್ಥೆ, ವಿದ್ಯುತ್ ದೀಪ ಹಾಗೂ ಮಹಿಳಾ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ರಾತ್ರಿ ವಾಸ್ತವ್ಯ ಮಾಡಲು ಯಾವುದೇ ಅನುಕೂಲ ಕಲ್ಪಿಸಿಲ್ಲವೆಂದು ಹೇಳಿದರು.
ಸೇಡಂ, ಚಿತ್ತಾಪುರ, ಆಳಂದ, ಅಫಜಲ್ಪುರ, ಗುಲ್ಬರ್ಗ, ಚಿಂಚೋಳಿ ತಾಲೂಕುಗಳ ಕಾಯ್ದಿರಿಸಿದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ ಪತ್ರಕರ್ತರ ಸಮ್ಮುಖದಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.
ಅಧಿಕಾರಿಗಳ ನಿರ್ಲಕ್ಷ್ಯ: ಶನಿವಾರ ಬೆಳಗ್ಗೆ ಚುನಾವಣೆ ಕರ್ತವ್ಯಕ್ಕೆ ಬೇರೆ ಬೇರೆ ತಾಲೂಕುಗಳಿಂದ ಆಗಮಿಸಿದ ಸಿಬ್ಬಂದಿಗೆ ಕುಡಿವ ನೀರು, ಮಹಿಳಾ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆ ಇರದೇ ಇರುವುದರಿಂದ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿದಾಗ ಬೇಜವಾಬ್ದಾರಿತನದಿಂದ ಉತ್ತರಿಸಿದ್ದಾರೆ ಎಂದು ಚಿಂಚೋಳಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಿಶೋರ ನಾಯನೂರ ತಿಳಿಸಿದರು.
ಕಡು ಬೇಸಿಗೆ ಇರುವುದರಿಂದ ಪಟ್ಟಣದಿಂದ 2 ಕಿಮೀ ದೂರದಲ್ಲಿರುವ ಪದವಿ ಕಾಲೇಜಿನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸದ ಕಾರಣ ಸಿಬ್ಬಂದಿ ಪಟ್ಟಣಕ್ಕೆ ಹೋಗಿ ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಎಸ್ಸಿ, ಎಸ್ಟಿ ನೌಕರರ ಸಂಘದ ಉಪಾಧ್ಯಕ್ಷ ಶ್ರೀಮಂತರಾವ ಇಂಗಳೆ ತಿಳಿಸಿದರು.
ನಾವು ಈ ಹಿಂದೆ ಅನೇಕ ಚುನಾವಣಾ ಕರ್ತವ್ಯ ನಿರ್ವಹಿಸಿದ್ದು, ಇಂಥಹ ಅವ್ಯವಸ್ಥೆಯನ್ನು ನಮ್ಮ ಸೇವೆಯಲ್ಲಿಯೇ ಕಂಡಿಲ್ಲವೆಂದು ಚಿತ್ತಾಪುರ ತಾಲೂಕಿನ ಶಿಕ್ಷಕ ನಂದಕಿಶೋರ ತಿಳಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.