ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜಿಲ್ಲೆಯಲ್ಲಿ ಶೇ. 61 ಶಾಂತಿಯುತ ಮತದಾನ

Lingaraj Badiger
Updated On : 6 May 2013, 11:53 am

ಕನ್ನಡಪ್ರಭ ವಾರ್ತೆ, ಯಾದಗಿರಿ, ಮೇ 5
ಜಿಲ್ಲೆಯಾದ ಬಳಿಕ ಚೊಚ್ಚಲ ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ನಾಲ್ಕು ಕ್ಷೇತ್ರಗಳಲ್ಲಿ ಭಾನುವಾರ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಜರುಗಿದೆ. ಸುಮಾರು ಶೇ. 59ರಷ್ಟು ಮತದಾನವಾಗಿದ್ದು, 2008ರ ಚುನಾವಣೆಗಿಂತ ಮತದಾನ ಪ್ರಮಾಣ ತುಸು ಹೆಚ್ಚಾಗಿದೆ.
  ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ ಹಾಗೂ ಗುರುಮಠಕಲ್ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿನ ತಾಂತ್ರಿಕ ತೊಂದರೆಯಂಥ ಸಣ್ಣಪುಟ್ಟ ಗೊಂದಲ ಬಿಟ್ಟರೆ ಶಾಂತಿ ಕದಡುವ ಯಾವುದೇ ಪ್ರಕರಣ ಜಿಲ್ಲೆಯಲ್ಲಿ ನಡೆದಿಲ್ಲ.
ಶೇಕಡಾವಾರು ಮತದಾನ: ಯಾದಗಿರಿ ಕ್ಷೇತ್ರದಲ್ಲಿ ಶೇ.60, ಶಹಾಪುರದಲ್ಲಿ ಶೇ. 60, ಸುರಪುರದಲ್ಲಿ ಶೇ. 62 ಹಾಗೂ ಗುರುಮಠಕಲ್‌ನಲ್ಲಿ ಶೇ. 62ರಷ್ಟು ಮತದಾನವಾಗಿದೆ.
ಸಣ್ಣಪುಟ್ಟ ಗೊಂದಲ: ಯಾದಗಿರಿ ಕ್ಷೇತ್ರದ ಕಾಟಮ್ಮನಳ್ಳಿ ಮತಗಟ್ಟೆಯಲ್ಲಿ ಕೆಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ಬಲವಂತ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದರಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ನಂತರ ವಾತಾವರಣ ತಿಳಿಯಾಯಿತು.
  ಯಾದಗಿರಿ ಕ್ಷೇತ್ರದ ಚಟ್ನಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಸಮುದಾಯದವರಿಗೆ ದೂರದಲ್ಲಿ ಮತಗಟ್ಟೆ ತೆರೆಯಲಾಗಿದೆ ಎಂದು ಆರೋಪಿಸಿ ಆ ಸಮುದಾಯದವರು ಮಧ್ಯಾಹ್ನ 12ರವರೆಗೆ ಮತದಾನ ಬಹಿಷ್ಕರಿಸಿದ್ದರು. ನಂತರ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಭೇಟಿ ನೀಡಿ ಮನವರಿಕೆ ಮಾಡಿದ್ದರಿಂದ ನಂತರ ಮತದಾನ ನಡೆಯಿತು.
ತಾಂತ್ರಿಕ ದೋಷ: ಸುರಪುರ ಕ್ಷೇತ್ರದ ಬೂದಿಹಾಳ ಹಾಗೂ ಹಗರಟಗಿ ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಳಗ್ಗೆ ಸ್ವಲ್ಪ ಹೊತ್ತು ಮತದಾನ ಸ್ಥಗಿತಗೊಂಡಿತ್ತು. ತಕ್ಷಣ ಬೇರೆ ಮತಯಂತ್ರ ವ್ಯವಸ್ಥೆ ಕೈಗೊಂಡಿದ್ದರಿಂದ ನಂತರ ಮತದಾನ ಪ್ರಕ್ರಿಯೆ ಸಾಂಗವಾಗಿ ನಡೆಯಿತು. ಇಂಥ ಸಣ್ಣಪುಟ್ಟ ಘಟನೆ ಬಿಟ್ಟರೆ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.
ಜಿಲ್ಲೆಗೆ ಚೊಚ್ಚಲ ಚುನಾವಣೆ: ಯಾದಗಿರಿ ಜಿಲ್ಲೆಯಾದ ಬಳಿಕ ಇದೇ ಮೊದಲ ಬಾರಿಗೆ ಈ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಆದ್ದರಿಂದ ಮತಗಟ್ಟೆ ಸಿಬ್ಬಂದಿ, ಅಧಿಕಾರಿಗಳು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವವರೇ ಆಗಿದ್ದು, ಅವರಿಗೆ ಹೊಸ ಅನುಭವ ನೀಡಿತು. ಅಲ್ಲದೇ ಡಿಮಸ್ಟರಿಂಗ್ ಕಾರ್ಯಕ್ಕೂ ಅನುಕೂಲವಾಯಿತು.
  2008ರ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳ ಮತಯಂತ್ರಗಳನ್ನು ಗುಲ್ಬರ್ಗಕ್ಕೆ ಒಯ್ದು ಇಡಬೇಕಿತ್ತು. ಆದರೆ ಈ ಬಾರಿ ಜಿಲ್ಲೆಯಲ್ಲೇ ನಿಗದಿಗೊಳಿಸಿದ ಮಸ್ಟರಿಂಗ್ ಕೇಂದ್ರಗಳಿಗೆ ತೆರಳಿ ಮತಗಟ್ಟೆ ಸಿಬ್ಬಂದಿ ಮತಯಂತ್ರಗಳನ್ನು ಸುರಕ್ಷಿತವಾಗಿ ಒಪ್ಪಿಸಲು ಸಾಧ್ಯವಾಯಿತು. ಕಳೆದ ಬಾರಿಯಂತೆ ಯಾವುದೇ ಅಹಿತಕರ ಘಟನೆ ಜರುಗದೇ ಮತದಾನ ನಡೆಯಿತು. 2008ರಲ್ಲಿ ಶೇ. 56.3ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾನದ ಜಾಗೃತಿ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣದಲ್ಲಿ ಸ್ವಲ್ಪ ಏರಿಕೆಯಾಗಿದೆ.
ಜಿಲ್ಲಾಧಿಕಾರಿ ತೃಪ್ತಿ: ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆದಿರುವುದಕ್ಕೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ತೃಪ್ತಿ ವ್ಯಕ್ತಪಡಿಸಿದ್ದಾರೆ. ಎಲ್ಲ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದಿಂದ ಮತದಾನ ಪಾರದರ್ಶಕ ಹಾಗೂ ಮುಕ್ತವಾಗಿ ನಡೆದಿದೆ. ಮತದಾನ ನಡೆಯುವ ವೇಳೆ ಎಲ್ಲಾ ಕ್ಷೇತ್ರಗಳಿಗೆ ಬೇಟಿ ನೀಡಿ ಪರಿಶೀಲಿಸಿದ್ದೇನೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪೊಲೀಸ್ ಇಲಾಖೆಯ ಸಹಕಾರವನ್ನೂ ನೆನಪಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ಬಿಗು ಭದ್ರತೆ: ಎಲ್ಲಾ ಮತಗಟ್ಟೆಗಳಲ್ಲಿ ಭದ್ರತಾ ವ್ಯವಸ್ಥೆ ಬಿಗುವಿನಿಂದ ಕೂಡಿತ್ತು. ಅರೆ ಸೇನಾ ಪಡೆಯ ಯೋಧರು, ಸ್ಥಳೀಯ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಲಿಲ್ಲ.
  ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚು ಭದ್ರತೆ ಕೈಗೊಳ್ಳಲಾಗಿತ್ತು. ಮತಗಟ್ಟೆಯಿಂದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದುದರಿಂದ ಸಾರ್ವಜನಿಕರ ಅಕ್ರಮ ಪ್ರವೇಶಕ್ಕೆ ತಡೆ ಬಿದ್ದಿತ್ತು. ಆದ್ದರಿಂದ ಮತದಾರರು ನಿರ್ಭೀತಿಯಿಂದ ಹಕ್ಕು ಚಲಾಯಿಸಲು ಬರುವ ವಾತಾವರಣ ಸೃಷ್ಟಿಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement