ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಭೀಮಾತೀರದಲ್ಲಿ ಬಿರುಸಿನ ಮತದಾನ

Lingaraj Badiger
Updated On : 6 May 2013, 11:50 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ/ಅಫಜಲ್ಪುರ, ಮೇ 5
ಜಿಲ್ಲೆಯ ಕೊನೆಯ ಗ್ರಾಮ, ಭೀಮಾ ತೀರದ ಅಫಜಲ್ಪುರ ತಾಲೂಕಿನ ಮಣ್ಣೂರು, ಶೇಷಗಿರಿ, ಹೊಸೂರ್ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳಲ್ಲಿ ಭಾನುವಾರ ಬಿರುಸಿನ ಮತದಾನವಾಗಿದೆ. ಬಿಸಿಲಿನ ತಾಪ ಪ್ರಖರವಾಗಿದ್ದರೂ ಅದನ್ನು ಲೆಕ್ಕಿಸದೆ ಇಲ್ಲಿನ ಜನತೆ ಸರತಿಯಲ್ಲಿ ನಿಂತು ಬೆಳಗ್ಗೆಯಿಂದಲೇ ಉತ್ಸಾಹದಿಂದ ಮತದಾನ ಮಾಡುತ್ತಿದ್ದ ನೋಟಗಳು ಕಂಡವು.
ಈ ಹಳ್ಳಿಗಳಲ್ಲಿ 'ಕನ್ನಡಪ್ರಭ' ಸುತ್ತಾಡಿದಾಗ ವಿಶೇಷವಾಗಿ ಮಹಿಳೆಯರು, ಯುವತಿಯರು ಸರತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರಲ್ಲದೆ ಗುರುತಿನ ಚಿಟ್ಟಿಯೊಂದಿಗೆ ಮತದಾನಕ್ಕೆ ಅಣಿಯಾಗಿದ್ದರು.
ಮಣ್ಣೂರಲ್ಲಿರುವ 5,581 ಮತದಾರರ ಪೈಕಿ 3,641 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ರಾಮನಗರದಲ್ಲಿ 620, ಹೊಸೂರ- 1,230, ವಾಡಿ- 453, ಶೇಷಗಿರಿವಾಡಿ 750 ಮತಗಳ ಚಲಾವಣೆಯಾಗಿದೆ ಎಂದು ಅಫಜಲ್ಪುರದಿಂದ ಬಂದಿರುವ ವರದಿಗಳು ತಿಳಿಸಿವೆ.
ನೀರಿತ್ತು- ಗ್ಲಾಸ್ ಇರಲಿಲ್ಲ: ಬಿಸಿಲ ಧಗೆಯ ಹಿನ್ನೆಲೆಯಲ್ಲಿ ಮತದಾನದ ಅವಧಿ ವಿಸ್ತರಿಸಿದ್ದ ಚುನಾವಣಾ ಆಯೋಗ ಮತದಾರರಿಗೆ ಬಾಯಾರಿಕೆಯಾದಲ್ಲಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಎಲ್ಲೆಡೆ ಸೂಚನೆ ನೀಡಿತ್ತು. ಅದರಂತೆ ಮತಗಟ್ಟೆಗಳ ಮೊಗಸಾಲೆ ಮುಂಭಾಗದಲ್ಲೇ ನೀರಿನ ಕ್ಯಾನ್‌ಗಳು ಕಂಡವು. ಆದರೆ ಅಲ್ಲಿ ಕ್ಯಾನ್ ಬಳಸಿ ನೀರು ಕುಡಿಯಲು ಗ್ಲಾಸ್‌ಗಳ ಸೌಕರ್ಯವೇ ಇರಲಿಲ್ಲ. ಇದರಿಂದಾಗಿ ಸರತಿಯಲ್ಲಿ ಗಂಟೆಗಟ್ಟಳೆ ನಿಂತ ಮತದಾರರು ಕ್ಯಾನ್ ಸೌಕರ್ಯವಿದ್ದರೂ ನೀರು ಕುಡಿಯಲಾಗದೆ ಬಾಯಾರಿಕೊಂಡೇ ನಿಲ್ಲುವಂತಾಯ್ತು.
ಈ ಕುರಿತಂತೆ ಅಲ್ಲಿನ ವ್ಯವಸ್ಥಾಪಕರನ್ನು ಸಂಪರ್ಕಿಸಿದಾಗ ಅವರು ಕ್ಯಾನ್ ಇದೆ. ಗ್ಲಾಸ್ ಇಲ್ಲ, ನಾವರ ಎಷ್ಟಂತ ಸೌಕರ್ಯ ಕಲ್ಪಿಸಬೇಕು ಹೇಳ್ರಿ ಎಂದು ಹೇಳುತ್ತಲೇ ಬಂದವರು ತಮ್ಮ ಬಳಿಯ ಬಾಟಲ್ ಬಳಸಿ ನೀರು ತುಂಬಿಕೊಂಡು ಕುಡಿಯುತ್ತಾರೆ ಬಿಡ್ರಿ ಎಂದು ಉದಾಸೀನತೆ ತೋರಿಸಿದರು.
ಗೊಂಚಲು ಮತಗಟ್ಟೆ: ಮಣ್ಣೂರಲ್ಲಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಕೋಣೆಗಳನ್ನು ಮತಕೇಂದ್ರಕ್ಕಾಗಿ ಬಳಸಲಾಗಿತ್ತು. ಇಲ್ಲಿನ 2 ಕಟ್ಟಡಗಳಲ್ಲಿ 5 ಮತಗಟ್ಟೆಗಳನ್ನು ಜೋಡಿಸಲಾಗಿತ್ತು. ಆದ್ದರಿಂದ ಇಲ್ಲಿ ವಿಡಿಯೋ ಗ್ರಾಫಿ ಹಾಗೂ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಂಡುಬಂತು. ಸಶಸ್ತ್ರ ಗಡಿ ಭದ್ರತಾ ಪಡೆಯ ಸಿಬ್ಬಂದಿ ಈ ಗೊಂಚಲು ಮತಗಟ್ಟೆಗಳ ಸುರಕ್ಷತೆಗೆ ನಿಯೋಜಿತರಾಗಿದ್ದರು.
ಎಂದಿನಂತೆ ಮತದಾನಕ್ಕೆ ಆಗಮಿಸುತ್ತಿದ್ದ ತಾಯಂದಿರು, ಮಹಿಳೆಯರಂತೂ ಎಲ್ಲಿ ನೋಡಿದರಲ್ಲಿ ಬಂದೂಕು ಸಮೇತ ಜನ ಕಂಡಾಗ ಕೆಲಕ್ಷಣ ಗಾಬರಿಗೊಂಡಂತೆ ಕಂಡರೂ ಅದನ್ನು ತೋರಗೊಡದೆ ಸಾವರಿಸಿಕೊಂಡು ಎಂದಿನಂತೆ ಮತದಾನಕ್ಕೆ ನಿಲ್ಲುತ್ತಿದ್ದ ನೋಟಗಳು ಕಂಡವು. ಭದ್ರತಾ ಸಿಬ್ಬಂದಿ ಮತದಾರರಿಗೆ ಸೂಚನೆಗಳನ್ನು ನೀಡುತ್ತ ಮತಗಟ್ಟೆ ಮುಂದೆ ಶಿಸ್ತು ಹಾಳಾಗದಂತೆ ಕ್ರಮ ಕೈಗೊಂಡಿದ್ದರು.
ಸೇಡಂ; ಸಣ್ಣ ಪುಟ್ಟ ಗಲಾಟೆ
ಕನ್ನಡಪ್ರಭ ವಾರ್ತೆ, ಸೇಡಂ, ಮೇ 5
ಇಲ್ಲಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಗೊಂದಲ, ಗಲಾಟೆ ಹೊರತುಪಡಿಸಿ ಭಾನುವಾರ ಶಾಂತಿಯುತ ಮತದಾನ ಜರುಗಿದ್ದು, 66 ಪ್ರತಿಶತ ಮತಗಳು ಚಲಾವಣೆಯಾಗಿವೆ. ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆ ವೇಗವಾಗಿ ಜರುಗಿತು. ತಾಲೂಕಿನ ಎಲ್ಲ ಮತಗಟ್ಟೆಗಳಲ್ಲಿ ಚುನಾವಣೆ ಪ್ರಯುಕ್ತ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರಿಂದ ಮತದಾರರು ಸಾಲಾಗಿ ಬಂದು ಮತ ಚಲಾಯಿಸಿದರು.
ಬೂತ್‌ಸಂಖ್ಯೆ 111 ಕೊಂತನಪಲ್ಲಿ ಗ್ರಾಮದಲ್ಲಿ ಕೆಲ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ತೂರಿದ ಪರಿಣಾಮ, 4 ಜನರನ್ನು ಪೊಲೀಸರು ಬಂಧಿಸಿದ್ದಾರೆ. 131 ಹಣಮನಹಳ್ಳಿಯ ಮತಯಂತ್ರ ದೋಷಪೂರಿತವಾಗಿದ್ದ ಹಿನ್ನೆಲೆ 1 ಗಂಟೆ ಮತದಾನ ಸಮಯ ವಿಸ್ತರಿಸಲಾಗಿತ್ತು.
ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ್ ಸೇಡಂ ವಿದ್ಯಾನಗರದ ನಂ. 2 ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದರು. ಕಾಂಗ್ರೆಸ್ ಶಾಸಕ ಡಾ. ಶರಣಪ್ರಕಾಶ ಪಾಟೀಲ್ ತಮ್ಮ ಸ್ವಂತ ಗ್ರಾಮವಾದ ಊಡಗಿಯಲ್ಲಿ ಮತ ಚಲಾಯಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ್ ತೆಲ್ಕೂರ ವಿದ್ಯಾನಗರ ಬಡಾವಣೆಯ ನಂ 2 ಶಾಲೆಯಲ್ಲಿ ಮತ ಚಲಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement