ವ್ಯವಸ್ಥೆ ವಿರುದ್ಧ ಭುಸುಗುಟ್ಟಿದ ನಾಗಣ್ಣ ಮತ ನೀಡಲು ನಿರಾಕರಣೆ
ಗುಲ್ಬರ್ಗ/ಶಹಾಬಾದ್: ಕಳೆದ ಐದು ವರ್ಷದಿಂದ ನಗರದ ಅಭಿವೃದ್ಧಿಗೆ ನಿರ್ಲಕ್ಷ್ಯ, ಅಡುಗೆ ಅನೀಲ ವಿತರಣೆ ಸಮಸ್ಯೆ, ಪಡಿತರ ಚೀಟಿ ಸಮಸ್ಯೆಗಳಿಗೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸದೆ ಇರುವುದರಿಂದ ಭುಸುಗುಟ್ಟಿದ ನಾಗಣ್ಣಗೌಡ ಪಾಟೀಲ್ ಪ್ರತಿಭಟನೆ ಮಾಡಿ ಮತನಿರಾಕರಿಸಿದ ಘಟನೆ ನಗರದಲ್ಲಿ ನಡೆದಿದೆ.
ವಡ್ಡರ ಸಂಘ ಪ್ರದೇಶದ ಮತಗಟ್ಟೆ ಸಂಖ್ಯೆ 226ರಲ್ಲಿ ಭಾನುವಾರ ಬೆಳಗ್ಗೆ 10ಕ್ಕೆ ತಮ್ಮ ಮತದಾನ ಹಕ್ಕನ್ನು ಚಲಾಯಿಸಲು ಮತಗಟ್ಟೆಗೆ ಹೋದರು. ಮತ ಚಲಾವಣೆಗೆ ಅನುಸರಿಸಬೇಕಾದ ಎಲ್ಲ ನಿಯಮಗಳನ್ನು ಅನುಸರಿಸಿ, ಮತದಾನ ಮಾಡುವಾಗ ತಮ್ಮ ಮತವನ್ನು ಪಡೆಯಲು ಗುಲ್ಬರ್ಗ ಗ್ರಾಮೀಣ ಮತಕ್ಷೇತದಿಂದ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು ಮತ ಪಡೆಯಲು ಅನರ್ಹರಾಗಿದ್ದು, ಚುನಾವಣಾ ಅಧಿನಿಯಮ 1961 49(ಓ) ದ ಅನ್ವಯ ಇವರಿಗೆ ಮತದಾನ ಮಾಡುವುದಿಲ್ಲ ಎಂದು ಸಹಿ ಮಾಡಿ ಮತದಾನ ನಿರಾಕರಿಸಿದರು.
ಮತನಿರಾಕರಣೆ ಕ್ರಮ ಸಂ. 181ರಲ್ಲಿ ನೋಂದಾಣೆ: ಪಾಟೀಲರು ಕೈಗೊಂಡ ನಿರ್ಧಾರದಿಂದ ಮತಗಟ್ಟೆ ಅಧಿಕಾರಿಗಳು ರಿಜಿಸ್ಟ್ರೇಷನ್ ಸಂ.17 ಎ ಪ್ರಕಾರ ಅವರ ಮತ ನಿರಾಕರಣೆಯನ್ನು ಪಡೆದು, ಅದನ್ನು ಮತನಿರಾಕರಣೆ ಕ್ರಮ ಸಂ. 181ರಲ್ಲಿ ನೋಂದಾಯಿಸಿಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ದಿ.ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ನಗರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ನಂತರ ನಿರ್ಲಕ್ಷಿಸಲಾಗಿದೆ. ಕೇಂದ್ರ, ರಾಜ್ಯದಿಂದ ಕೋಟಿಗಟ್ಟಲೆ ಅನುದಾನ ಬಂದರು ಅಭಿವೃದ್ಧಿ ಶೂನ್ಯ.
ಜನತೆ 7 ವರ್ಷಗಳಿಂದ ಅಡುಗೆ ಅನೀಲ ಸಮಸ್ಯೆ ಅನುಭವಿಸುತ್ತಿದ್ದರು. ಸಚಿವ ಬೆಳಮಗಿ ಸಹಿತ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ದೂರಿದ ಅವರು, ನಗರದ ಬಡವರಿಗೆ ಸಮರ್ಪಕ ಪಡಿತರ ಚೀಟಿ ಹಂಚಿಕೆಯಾಗದೆ ಇದ್ದು, ಜನರ ಸಮಸ್ಯೆಗೆ ಸ್ಪಂದಿಸದ ಇವರಿಗೆ ನನ್ನ ಹಕ್ಕಾದ ಮತದ ದಾನವನ್ನು ಮಾಡುವುದಿಲ್ಲ ಎಂದರು.
ರಾಜಕಾರಣಿಗಳಿಗೆ ಎಚ್ಚರಿಕೆ: ಜನರಿಗೆ ಅಶ್ವಾಸನೆ ಮೂಲಕ ಮಂಕು ಬೂದಿ ಎರಚುವುದು ಮಾಡುವ ರಾಜಕಾರಣಿಗಳಿಗೆ ಇದು ಒಂದು ಎಚ್ಚರ ಸಂದೇಶವಾಗಿದ್ದು, ಈಗ ಕೇವಲ ಶಹಾಬಾದ್ನ ಒಬ್ಬ ವ್ಯಕ್ತಿಯಿಂದ ಪ್ರಾರಂಭವಾದ ಪ್ರತಿಭಟನೆ, ಬೃಹದಾಕಾರವಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಕ್ಕಿಲ್ಲ, ಈ ಬಗ್ಗೆ ರಾಜಕಾರಣಿಗಳು ಒಬ್ಬ ವ್ಯಕ್ತಿ ಹೋರಾಟ ಎಂದು ಪರಿಗಣಿಸದೆ ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯಕವಾಗಿದೆ.