ಸುರಪುರ ಶೇ. 62
ಕನ್ನಡಪ್ರಭ ವಾರ್ತೆ, ಸುರಪುರ, ಮೇ 5
ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಜಿದ್ದಾಜಿದ್ದಿನ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟರುವ ಸುರಪುರ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ನಡೆದ ಮತದಾನ ಸಂಪೂರ್ಣ ಶಾಂತಿಯುತವಾಗಿದ್ದು, ಸುಮಾರು ಶೇ. 62ರಷ್ಟು ಮತದಾನವಾಗಿದೆ.
ಬಹುತೇಕ ಚುನಾವಣೆಗಳಲ್ಲಿ ಮತದಾನದ ದಿನ ಸಣ್ಣಪುಟ್ಟ ಘಟನೆ ಜರುಗಿ ಸುದ್ದಿಯಲ್ಲಿರುತ್ತಿದ್ದ ಕ್ಷೇತ್ರ ಈ ಬಾರಿ ಯಾವುದೇ ಅಹಿತಕರ ಘಟನೆಗೆ ಸಾಕ್ಷಿಯಾಗಲಿಲ್ಲ. ರಂಗಂಪೇಟ, ತಳವಾರಗೇರಾ, ಕುಂಬಾರಪೇಟ, ಶಖಾಪುರ ಗ್ರಾಮಗಳಲ್ಲಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಬಿಟ್ಟರೆ ಶಾಂತಿಯುತವಾಗಿ ಮತದಾನ ನಡೆದಿದೆ. ಬೆಳಗ್ಗೆ 7ರಿಂದ ಆರಂಭವಾದ ಮತದಾನದ ಸಂಜೆ 6ರವರೆಗೆ ಸುಗಮವಾಗಿ ಸಾಗಿತ್ತು. ಮಧ್ಯಾಹ್ನ 1ರವರೆಗೆ ಶೇ. 45ರಷ್ಟು ಮತದಾನವಾಗಿತ್ತು. ಬೇಸಿಗೆ ಬಿಸಿಲಿನ ತಾಪಮಾನಕ್ಕೆ ತತ್ತರಿಸಿದ ಮತದಾರರು ಬೆವರಿಸಿಕೊಳ್ಳುತ್ತಲೇ ಹಕ್ಕು ಚಲಾಯಿಸುತ್ತಿದ್ದರು.
ಮತಯಂತ್ರದಲ್ಲಿ ದೋಷ: ಸುರಪುರ ಪುರಸಭೆಯ ಮತಗಟ್ಟೆ ಸಂಖ್ಯೆ 76ರ ಬೂದಿಹಾಳ ಮತಗಟ್ಟೆಯಲ್ಲಿ ಮತಯಂತ್ರ ದೋಷದಿಂದ ಕೆಲ ಸಮಯದವರಗೆ ಮತದಾನ ಸ್ಥಗಿತಗೊಂಡಿತು. ನಂತರ ಮತಯಂತ್ರ ಸರಿಪಡಿಸಿ ಮತ್ತೆ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.
ಕಳೆದ ಬಾರಿಯ ಚುನಾವಣೆಯಲ್ಲಿ ಶೇ. 59ರಷ್ಟು ಮತದಾನವಾಗಿತ್ತು. ಮತದಾನ ಹೆಚ್ಚಿಸಲು ಚುನಾವಣಾ ಆಯೋಗವು ಹಲವಾರು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಈ ಬಾರಿ ಶೇ.6 ರಷ್ಟು ಮತದಾನ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ.
ಮತದಾರರ ಉತ್ಸಾಹ: ಪಟ್ಟಣದ ಬಹುತೇಕ ಬಡವಣೆಗಳಲ್ಲಿ ಬೆ.7ರಿಂದಲೇ ಮತದಾರರು ಅತ್ಯಂತ ಉತ್ಸಾಹದಿಂದ ಮತಗಟ್ಟೆಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ತಮ್ಮ ಮತ ಚಲಾಯಿಸುವುದು ಕಂಡು ಬಂದಿತು. ಕೆಲ ಕಡೆ ವಯೋವೃದ್ಧರು, ವಿಕಲಚೇತನರು ತಮ್ಮ ಸಹಾಯಕರೊಂದಿಗೆ ಆಗಮಿಸಿದರೆ, ಅಂಧರನ್ನು ಯುವಕರು ಮತಕೇಂದ್ರಗಳಿಗೆ ಹೊತ್ತು ತರುವುದು ಸಾಮಾನ್ಯವಾಗಿತ್ತು.
ಜೆಡಿಎಸ್ ಅಭ್ಯರ್ಥಿ ರಾಜುಗೌಡ ಕೊಡೇಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಪತ್ನಿ ಮೈತ್ರಾರೊಂದಿಗೆ ಸಾಲಿನಲ್ಲಿ ನಿಂತು ಮತಚಲಾಯಿಸಿ ಗಮನಸೆಳೆದರು.
ಮಾಜಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ರಾಜಾ ಮದನಗೋಪಾಲನಾಯಕರು ಕೂಡ ತಮ್ಮ ಪತ್ನಿ ರಾಣಿ ಶಕುಂತಲಾ ದೇವಿಯೊಂದಿಗೆ ಮತಗಟ್ಟೆ ಸಂಖ್ಯೆ 72ರಲ್ಲಿ ಮತ ಚಲಾಯಿಸಿದರು. ಮತದಾನ ಅಂಗವಾಗಿ ಗ್ರಾಮೀಣ ಪ್ರದೇಶದಿಂದ ಜನರು ಬಾರದಿರುವುದರಿಂದ ಪಟ್ಟಣದ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು.