ಗುವಿವಿ ಜ್ಞಾನಗಂಗೆ ಅಂಗಳದಲ್ಲಿ ಸಿದ್ಧತೆ
ಗುಲ್ಬರ್ಗ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ನಡೆದ ಚುನಾವಣೆ ಶಾಂತಿಯುತವಾಗಿ ಜರುಗಿದೆ. ಮೇ 8ರಂದು ಜರುಗುವ ಚುನಾವಣಾ ಮತ ಎಣಿಕೆ ಕಾರ್ಯವು ಈ ಮುಂದೆ ನಮೂದಿಸಿರುವ ಗುಲ್ಬರ್ಗ ವಿವಿ ಅಂಗಳದ ವಿವಿಧ ವಿಭಾಗಗಳಲ್ಲಿ ಜರುಗಲಿದೆ.
ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಮೇ 8ರಂದು ನಡೆಯುವ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಗೆ ಅಭ್ಯರ್ಥಿಗಳನ್ನು, ಆಯಾ ಪಕ್ಷಗಳ ಏಜೆಂಟರನ್ನು ಹಾಗೂ ಎಣಿಕಾ ಪ್ರಕ್ರಿಯೆಯಲ್ಲಿ ಕಾರ್ಯನಿರತ ಸಿಬ್ಬಂದಿಯನ್ನು ಕರೆದೊಯ್ಯಲು ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ಅವರು ಹೇಳಿದರು.
ಎಣಿಕಾ ಕೇಂದ್ರಗಳಿಗೆ ಭೇಟಿ: ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ವಿಶ್ವವಿದ್ಯಾಲಯದ ಮುಖ್ಯ ದ್ವಾರದಿಂದ ಮತ ಎಣಿಕೆ ಕೇಂದ್ರಗಳಿಗೆ ಯಾವುದೇ ತರಹದ ವಾಹನ ಪ್ರವೇಶ ನಿಷೇಧಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ವಾಹನಗಳನ್ನು ಬುದ್ಧ ವಿಹಾರದ ಪ್ರವೇಶ ದ್ವಾರದ ಹತ್ತಿರ ನಿಲುಗಡೆ ಮಾಡಬಹುದಾಗಿದೆ ಎಂದರು.
ಲೇಬಲ್ಗಳುಳ್ಳ ಬಸ್ಸುಗಳ ವ್ಯವಸ್ಥೆ: ಈಗಾಗಲೇ ಎಲ್ಲ ಸಿಬ್ಬಂದಿ, ಅಭ್ಯರ್ಥಿಗಳಿಗೆ, ಏಜೆಂಟರಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಕಡ್ಡಾಯಾವಾಗಿ ಈ ಗುರುತಿನ ಚೀಟಿಯನ್ನು ಹೊಂದಿರುವ ಅಭ್ಯರ್ಥಿಗಳು ಮತ್ತು ಏಜೆಂಟರನ್ನು ವಿಶ್ವವಿದ್ಯಾಲಯದ ಮುಖ್ಯ ದ್ವಾರದಿಂದ ಮತ ಏಣಿಕೆ ಕೇಂದ್ರದವರೆಗೆ ಕರೆದೊಯ್ಯಲು ಗುಲಾಬಿ (ಪಿಂಕ್) ಬಣ್ಣದ ಲೇಬಲ್ಗಳುಳ್ಳ ಅದೇ ರೀತಿ ಗುರುತಿನ ಚೀಟಿಯುಳ್ಳ ಅಧಿಕಾರಿ ಹಾಗೂ ಸಿಬ್ಬಂದಿಗೆ ಮತ ಎಣಿಕಾ ಕೇಂದ್ರಗಳಿಗೆ ಕರೆದೊಯ್ಯಲು ಬಿಳಿ ಬಣ್ಣದ ಲೇಬಲ್ಗಳುಳ್ಳ ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸಾರ್ವಜನಿಕರು ವಿಶ್ವವಿದ್ಯಾಲಯದ ಪ್ರವೇಶ ದ್ವಾರವನ್ನು ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮತ ಎಣಿಕೆಯ ಸುತ್ತುವಾರು ಫಲಿತಾಂಶವನ್ನು ಧ್ವನಿವರ್ಧಕದ ಮೂಲಕ ಘೋಷಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಐಎಎಸ್ ಪ್ರಶೀಕ್ಷಣಾರ್ಥಿ ಅಭಿರಾಮ ಶಂಕರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಎ.ಟಿ. ಜಯಪ್ಪ ಮತ್ತಿತರರು ಹಾಜರಿದ್ದರು.