ಬಸವ ಜಯಂತಿ; ಆಚರಣೆಗೆ ಕರೆ
ಗುಲ್ಬರ್ಗ: ಜಗಜ್ಯೋತಿ ಬಸವೇಶ್ವರ ಜಯಂತಿಯ ಶತಮಾನೋತ್ಸವ ವರ್ಷಾದ್ಯಂತ ಆಚರಿಸಲು ನಿರ್ಧರಿಸಲಾಗಿದ್ದರಿಂದ ಜಿಲ್ಲಾದ್ಯಂತ ಎಲ್ಲ ಬಸವ ಅಭಿಮಾನಿಗಳು ಹಾಗೂ ಸಂಘ-ಸಂಸ್ಥೆಯವರು ಸಂಭ್ರಮದಿಂದ ಜಯಂತ್ಯುತ್ಸವ ಆಚರಿಸಬೇಕೆಂದು ಜಿಲ್ಲಾ ವೀರಶೈವ ಯುವ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಗರೂರ ಕರೆ ನೀಡಿದ್ದಾರೆ. ಮೇ 14ರಂದು ನಡೆಯುವ ಬಸವ ಜಯಂತ್ಯುತ್ಸವ ಸಡಗರ, ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲು ಉದ್ದೇಶಿಸಿ ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಅದಲ್ಲದೇ ಮುಂದೆ ವರ್ಷವೀಡಿ ಜಯಂತ್ಯುತ್ಸವ ಆಚರಿಸುವ ಬಸವಾಭಿಮಾನಿಗಳು ಹಾಗೂ ಸಮಾಜದ ಹಿರಿಯರು, ಯುವಕರು ಮುಂದೆ ಬಂದಲ್ಲಿ ವೇದಿಕೆ ಅವರ ನೆರವಿಗೆ ಬರುತ್ತದೆ ಎಂದು ತಿಳಿಸಿದ್ದಾರೆ.
ಡಾ. ಬಾಬುಜೀ ಜಯಂತಿ
ಗುಲ್ಬರ್ಗ: ನಗರದ ಬೋರಾಬಾಯಿ ನಗರದ ಸಮುದಾಯ ಭವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 122ನೇ ಮತ್ತು ಡಾ. ಬಾಬು ಜಗಜೀವನರಾಮ್ ಅವರ 106ನೇ ಜಯಂತ್ಯುತ್ಸವ ಆಚರಿಸಲಾಯಿತು. ನಗರಸಭೆಯ ಸದಸ್ಯ ನಾಗರಾಜ ಗುಂಡಗುರ್ತಿ ಅವರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಬೋರಾಬಾಯಿ ನಗರದ ಹಿರಿಯ ದಲಿತ ಮುಖಂಡ ಡಾ. ಗೋಪಾಲರಾವ ತೇಲಂಗಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ವಿನೋದಕುಮಾರ ಎನ್. ಟೈಗರ್, ಅಶೋಕಕುಮಾರ ಎಚ್. ವಾಲೀಕರ್, ಇ.ಜಿ. ಮರಕೋಳಕರ್, ನಾಗರಾಜ ಗುಂಡಗುರ್ತಿ, ಮಂಜು ದೊಡ್ಡಮನಿ, ರಾಜು ಸಿಂಗೆ, ಮಲ್ಲಿಕಾರ್ಜುನ, ರಾಮಕೃಷ್ಣ ಭಾವೆ ಹಾಗೂ ಬೋರಾಬಾಯಿ ಇದ್ದರು.
ಪದಾಧಿಕಾರಿ ಆಯ್ಕೆ
ಗುಲ್ಬರ್ಗ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಇತ್ತೀಚೆಗೆ ತಾಲೂಕು ಮಟ್ಟದ ಸಭೆ ಕರೆದು ಜಿಲ್ಲಾ ಸಂಘಟನಾ ಸಂಚಾಲಕ ಹಾಗೂ ನ್ಯಾಯವಾದಿ ಪ್ರಕಾಶ ಆರ್. ಮಾಳಗೆ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಸಂಚಾಲಕ ಶಿವಾನಂದ ಎಂ. ಸಾವಳಗಿ, ಜಿಲ್ಲಾ ಸಂಘಟನಾ ಸಂಚಾಲಕ ಶಿವಮೂರ್ತಿ ಎಸ್. ಹಡಗಿಲ್ ಸಮ್ಮುಖದಲ್ಲಿ ಗುಲ್ಬರ್ಗ ತಾಲೂಕು ಸಂಚಾಲಕರಾಗಿ ಶಿವು ಎಸ್. ಅಜಾದಪುರ ಅವರಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕೂಡಲೇ ಕಾರ್ಯಪ್ರವೃತ್ತರಾಗಿ ಸಂಘಟನೆ ಬಲಪಡಿಸಲು ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಮಾಳಗೆ ತಿಳಿಸಿದ್ದಾರೆ.
ವಾಲ್ಮೀಕಿ ಮತದಾನ
ಗುಲ್ಬರ್ಗ/ಶಹಾಬಾದ್: ವಾಡಿ ಪಟ್ಟಣದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆ ಮತಗಟ್ಟೆಯಲ್ಲಿ ಚಿತ್ತಾಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ವಾಲ್ಮೀಕಿ ನಾಯಕ ತಮ್ಮ ಮತ ಚಲಾಯಿಸಿದರು. ಬೆಳಗ್ಗೆ 7. 30ರ ಸುಮಾರಿಗೆ ಮತಗಟ್ಟೆಗೆ ಆಗಮಿಸಿದ ಅವರು ತಮ್ಮ ಹಕ್ಕನ್ನು ಚಲಾಯಿಸಿದರು. ಪಟ್ಟಣದ ಜಾಂಬವೀರ ಕಾಲೋನಿ, ಅಂಬೇಡ್ಕರ್ ಕಾಲೋನಿ ಪ್ರದೇಶದಲ್ಲಿ ಮತಗಟ್ಟೆ ವ್ಯಾಪ್ತಿಯೊಳಗೆ ಬಂದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಓಡಿಸುತ್ತಿರುವುದರಿಂದ ಸ್ಪಲ್ಪ ಮಟ್ಟಿಗೆ ತಕರಾರು ನಡೆಯಿತು. ನಂತರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಸ್ಥಳಕ್ಕೆ ಆಗಮಿಸಿ ಪೊಲೀಸರೊಂದಿಗೆ ಚರ್ಚಿಸಿ, ಪರಿಸ್ಥಿತಿ ತಿಳಿಗೊಳಿಸಿದರು.