ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮತ ಎಣಿಕೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ

Lingaraj Badiger
Updated On : 7 May 2013, 10:56 am

ಕನ್ನಡಪ್ರಭ ವಾರ್ತೆ, ಯಾದಗಿರಿ, ಮೇ 6
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮೇ 8ರಂದು ನಗರದ ಚಿತ್ತಾಪುರ ರಸ್ತೆಯಲ್ಲಿರುವ ಡಾನ್ ಬೋಸ್ಕೊ ಕಾಲೇಜಿನ ಕಟ್ಟಡದಲ್ಲಿ ನಡೆಯಲಿದ್ದು, ಸಕಲ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ಸಂಪೂರ್ಣ ಫಲಿತಾಂಶ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ಪಿ.ರಾಜೇಂದ್ರ ಚೋಳನ್ ತಿಳಿಸಿದರು.
  ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತ ಎಣಿಕೆ ಕಾರ್ಯದಲ್ಲಿ 55 ಎಣಿಕೆ ಸಿಬ್ಬಂದಿ ಮತ್ತು ಅವರಿಗೆ ಸಹಾಯಕರಾಗಿ 250 ಜನ ಸೇರಿದಂತೆ 800 ಸಿಬ್ಬಂದಿ ನಿಯೋಜನೆ  ಮಾಡಲಾಗಿದೆ. ಮತ ಎಣಿಕೆಗಾಗಿ ಪ್ರತಿ ಕ್ಷೇತ್ರಕ್ಕೂ 14 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ಯಾದಗಿರಿ ಮತ್ತು ಶಹಾಪುರ ಕ್ಷೇತ್ರಗಳಿಗೆ 16 ಸುತ್ತು, ಗುರುಮಠಕಲ್ 18 ಮತ್ತು ಸುರಪುರ ಕ್ಷೇತ್ರಕ್ಕೆ 20 ಸುತ್ತುಗಳಲ್ಲಿ ಎಣಿಕೆ ನಡೆಯಲಿದೆ. ಬಹುತೇಕ ಎಲ್ಲ ಕ್ಷೇತ್ರಗಳ ಫಲಿತಾಂಶ ಮಧ್ಯಾಹ್ನ 1ರೊಳಗಾಗಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಸೂಕ್ತ ಕ್ರಮ: ಮತ ಎಣಿಕೆ ಕೇಂದ್ರದ ಸುತ್ತ ಜನದಟ್ಟಣೆ ಸೇರದಂತೆ ಹಾಗೂ ಅಕ್ರಮಗಳು ಜರಗದಂತೆ ಸೂಕ್ತ ಕ್ರಮ ಜರಗಿಸಲಾಗಿದೆ. ಅಲ್ಲದೆ ಜಿಲ್ಲಾ ಕ್ರೀಡಾಂಗಣ ಮತ್ತು ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ತಲಾ ಎರಡು ದೊಡ್ಡ ಎಲ್ಸಿಡಿ ಸ್ಕ್ರೀನ್ ಅಳವಡಿಸಿ, ಅದರ ಮೂಲಕ ಫಲಿತಾಂಶದ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.
  ಚಿತ್ತಾಪುರ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಆ ರಸ್ತೆಯ ಮೂಲಕ ಬರುವ ಸಾರಿಗೆ ಬಸ್ಸಿನ ಮಾರ್ಗವನ್ನು ಬದಲಿಸಲಾಗಿದೆ. ಮತ ಎಣಿಕೆ ಕೇಂದ್ರ ಸುತ್ತ ಯಾವುದೇ ಅಹಿತಕರ ಘಟನೆ ಜರುಗದಂತೆ 144 ಕಲಂ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೇ 1,500 ಪೊಲೀಸರನ್ನು ಬಂದೋಬಸ್ತಿಗೆ ನಿಯೋಜಿಸಲಾಗುವುದು ಎಂದು ತಿಳಿಸಿದರು.
15 ಜನರಿಗೆ ಪ್ರವೇಶ: ಪ್ರತಿ ಟೇಬಲ್ಗೆ ಒಬ್ಬರಂತೆ ಏಜೆಂಟ್ ಹಾಗೂ ಅಭ್ಯರ್ಥಿ ಸೇರಿ 15 ಜನರಿಗೆ ಕೇಂದ್ರದಲ್ಲಿ ಪ್ರವೇಶಕ್ಕೆ ಅನುಮತಿ ನೀಡಲಾಗುವುದು. ಆದರೆ ಅವರು ಕಡ್ಡಾಯವಾಗಿ ಅನುಮತಿ ಪತ್ರ ಪಡೆದಿರಬೇಕು. ಇಲ್ಲದಿದ್ದರೆ ಅಭ್ಯರ್ಥಿಗೂ ಪ್ರವೇಶ ನಿರಾಕರಿಸಲಾಗುವುದು. ಮಾಧ್ಯಮ ಕೇಂದ್ರವನ್ನು ಸಹ ತೆರಯಲಾಗಿದ್ದು, ಪ್ರತಿ ಎಣಿಕಾ ಕೇಂದ್ರದಲ್ಲಿ ಕಂಪ್ಯೂಟರ್ ಅಳವಡಿಸಿ ಆ ಮೂಲಕ ಪ್ರತಿ ಸುತ್ತಿನ ಮಾಹಿತಿಯನ್ನು ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಎಲ್ಲರ ಸಹಕಾರ ಕಾರಣ: ಮೇ 5ರಂದು ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಕಳೆದ ಚುನಾವಣೆಗಿಂತ ಶೇಕಡಾವಾರು ಮತದಾನದಲ್ಲಿ ಹೆಚ್ಚಳವಾಗಿದೆ. ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಆದರೆ ಶಾಂತಿಯುತ ಹಾಗೂ ಪಾರದರ್ಶಕ ರೀತಿಯಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದಕ್ಕೆ ಎಲ್ಲರ ಸಹಕಾರವೇ ಕಾರಣವಾಗಿದೆ ಎಂದು ಹೇಳಿದರು.
ಐವರು ಶಿಕ್ಷಕರಿಗೆ ನೋಟಿಸ್: ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ್ದ 5 ಶಿಕ್ಷಕರು ಗೈರು ಹಾಜರಾದ ಹಿನ್ನೆಲೆಯಲ್ಲಿ ನೋಟಿಸ್ ನೀಡಿಲಾಗಿದೆ. ಅದೇ ರೀತಿ 9 ಜನ ಬ್ಯಾಂಕ್ ನೌಕರರು ಚುನಾವಣೇ ಕರ್ತವ್ಯಕ್ಕೆ ಬಾರದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಜರಗಿಸಲು ಅವರ ಮೇಲಾಧಿಕಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶೇ.64.92ರಷ್ಟು ಮತದಾನ
ಯಾದಗಿರಿ: ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಶೇ. 64.92ರಷ್ಟು ಮತದಾನವಾಗಿದೆ. ಯಾದಗಿರಿ ಕ್ಷೇತ್ರದಲ್ಲಿ ಶೇ. 62.69, ಶಹಾಪುರ ಕ್ಷೇತ್ರದಲ್ಲಿ ಶೇ. 67.34, ಸುರಪುರದಲ್ಲಿ ಶೇ. 66.16 ಹಾಗೂ ಗುರುಮಠಕಲ್ ಕ್ಷೇತ್ರದಲ್ಲಿ ಶೇ. 63,41ರಷ್ಟು ಮತದಾನವಾಗಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 4,03,198 ಪುರುಷ, 3,98,666 ಮಹಿಳಾ ಹಾಗೂ ಇತರೆ 36 ಸೇರಿದಂತೆ ಒಟ್ಟು 8,01,900 ಜನರು ಭಾನುವಾರ ಮತ ಚಲಾಯಿಸಲು ಅರ್ಹತೆ ಪಡೆದಿದ್ದರು. ಆ ಪೈಕಿ 2,65,115 ಪುರುಷ, 2,55,455 ಮಹಿಳಾ ಮತದಾರರು ಸೇರಿದಂತೆ 5,20,570 ಜನ ಹಕ್ಕು ಚಲಾಯಿಸಿದ್ದಾರೆ. ಇತರೆ 36 ಒಬ್ಬರೂ ಮತ ಚಲಾಯಿಸಿಲ್ಲ.
ಯಾದಗಿರಿ: ಕ್ಷೇತ್ರದಲ್ಲಿ 95,070 ಪುರುಷ, 95,456 ಮಹಿಳಾ, ಇತರೆ 9 ಸೇರಿದಂತೆ ಒಟ್ಟು 1,90,535 ಮತದಾರರಿದ್ದು, ಅವರಲ್ಲಿ 60,953 ಪುರುಷ, 58,498 ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದಾರೆ.
ಶಹಾಪುರ: ಕ್ಷೇತ್ರದಲ್ಲಿ 94,711 ಪುರುಷ, 93,328 ಮಹಿಳಾ, ಇತರೆ 10, ಒಟ್ಟು 1,88,049 ಮತದಾರರಿದ್ದು, ಅವರಲ್ಲಿ 65,119 ಪುರುಷ ಹಾಗೂ 65,522 ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದಾರೆ.
ಸುರಪುರ: ಕ್ಷೇತ್ರದಲ್ಲಿ 1,11,997 ಪುರುಷ, 1,08,277 ಮಹಿಳಾ ಹಾಗೂ ಇತರೆ 13 ಸೇರಿದಂತೆ ಒಟ್ಟು 2,20,287 ಮತದಾರರಿದ್ದು, ಆ ಪೈಕಿ 74,916 ಪುರುಷ, 70,821 ಮಹಿಳಾ ಮತದಾರರು ಮತ ಹಾಕಿದ್ದಾರೆ.
ಗುರುಮಠಕಲ್: ಕ್ಷೇತ್ರದಲ್ಲಿ 1,01,420 ಪುರುಷ, 1,01,605 ಮಹಿಳಾ, ಇತರೆ 4, ಒಟ್ಟು 2,03,029 ಮತದಾರರು, ಅವರಲ್ಲಿ 64217 ಪುರುಷ, 64614 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.
  ಜಿಲ್ಲೆಯಲ್ಲಿ ಪುರುಷ ಮತದಾರರೇ ಹೆಚ್ಚು ಮತ ಚಲಾಯಿಸಿದ್ದಾರೆ. ಶೇ. 65.75ರಷ್ಟು ಪುರುಷ, ಶೇ. 64.08ರಷ್ಟು ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement