ಯಾರಾಗ್ತಾರೆ ಆಳಂದ ಎಂಎಲ್ಎ?
ಆಳಂದ: ರಾಜಕೀಯ ಜಿದ್ದಾಜಿದ್ದಿ ನಡುವೆ ತೀವ್ರ ಹಣಾಹಣಿ ಮತ್ತು ಆರೋಪ ಪ್ರತ್ಯಾರೋಪ ಕಂಡಿದ್ದ ಇಲ್ಲಿನ ಚುನಾವಣೆಯಲ್ಲಿ ಯಾರಾಗ್ತಾರೆ ಶಾಸಕರು ಎಂಬ ಲೆಕ್ಕಾಚಾರ ಶುರುವಾಗಿದೆ. ಭಾನುವಾರ ನಡೆದ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಮತದಾರರು ಹಾಗೂ ರಾಜಕೀಯ ಪುಢಾರಿಗಳು ಯಾರು ಗೆಲ್ಲುತ್ತಾರೋ ಇನ್ಯಾರೋ ಸೋಲುತ್ತಾರೆಂದು ಬಿರುಸಿನ ಲೆಕ್ಕಾಚಾರಕ್ಕೆ ತೊಡಗಿದ್ದಾರೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರಲ್ಲೂ ಕೆಜೆಪಿ ಅಭ್ಯರ್ಥಿ ಬಿ.ಆರ್.ಪಾಟೀಲ ಅಥವಾ ಜೆಡಿಎಸ್ ಸುಭಾಷ ಗುತ್ತೇದಾರ ಇವರಿಬ್ಬರಲ್ಲಿ ಯಾರು ಗೆಲ್ಲುತ್ತಾರೋ ಎಂಬ ಚರ್ಚೆಗಳಿಗೆ ತೊಡಗಿದ್ದು, ಗಮನಾರ್ಹ ಸಂಗತಿ. ಅನೇಕ ಕಾರ್ಯಕರ್ತರೂ ಸಹ ತಮ್ಮ ನಾಯಕ ಗೆದ್ದರೆ ಹರಕೆ ತೀರಿಸುವ ಬೇಡಿಕೆ ಇಟ್ಟುಕೊಂಡಿದ್ದಾರೆ. ಮತಕ್ಷೇತ್ರದ ಮಾದನಹಿಪ್ಪರಗಾ, ನಿಂಬರಗಾ, ಆಳಂದ, ಖಜೂರಿ ಹೋಬಳಿಗಳಲ್ಲಿ ಕಳೆದ ಚುನಾವಣೆಗಿಂತ ಈ ಭಾರಿ ಹೆಚ್ಚಿನ ಮತದಾನವಾಗಿದ್ದು, ಕೆಜೆಪಿ ಅಭ್ಯರ್ಥಿ ಬಿ.ಆರ್. ಪಾಟೀಲ ಮತ್ತು ಜೆಡಿಎಸ್ ಅಭ್ಯರ್ಥಿ ಸುಭಾಷ ಗುತ್ತೇದಾರ ಅವರ ನಡುವೆ ಜಿದ್ದಾಜಿದ್ದಿ ಕಂಡುಬಂದಿದೆ. ಇವರಲ್ಲಿ ಗೆಲವಿನ ಮಾಲೆ ಯಾರಕೊರಳಿಗೆ ಬೀಳುತ್ತದೋ ಎಂಬುದೇ ಗುಟ್ಟು, ಮತದಾರ ತನ್ನ ಆಯ್ಕೆ ಅಚ್ಚೊತ್ತಿ ಮತಪೆಟ್ಟಿಗೆಯಲ್ಲಿ ಹಾಕಿದ್ದಾನೆ. ಮೇ 8 ರಂದು ನಿರ್ಧಾರ ಹೊರಬೀಳಲಿದೆ. ಕಾಂಗ್ರೆಸ್, ಬಿಜೆಪಿ, ಕೆಜೆಪಿ, ಜೆಡಿ(ಎಸ್) ಅಭ್ಯರ್ಥಿಗಳು ಸೇರಿದಂತೆ ಕಣದಲ್ಲಿ 13 ಮಂದಿ ಇದ್ದಾರೆ. ಆಳಂದ ಮತಕ್ಷೇತ್ರದಲ್ಲಿ 113 ಹಳ್ಳಿಗಳು, 229 ಮತಗಟ್ಟೆಗಳಿದ್ದು, ಕ್ಷೇತ್ರದಲ್ಲಿ 1, 93, 146 ಮತದಾರರಲ್ಲಿ ಪುರುಷರ 1, 01, 989 ಪೈಕಿ 70205 ಹಾಗೂ ಮಹಿಳೆಯರ 91157 ಪೈಕಿ 62154 ಮಹಿಳೆಯರು ಸೇರಿ 1, 32359 ಮಂದಿ (ಶೇ. 69) ಮತ ಚಲಾಯಿಸಿದ್ದಾರೆ. ಪಟ್ಟಣದ ಪ್ರದೇಶದಂತೆ ಗ್ರಾಮೀಣ ಪ್ರದೇಶದ ಅಲ್ಲದೆ, ತಾಂಡಾದ ಮತಗಟ್ಟೆಗಳಲ್ಲೂ ಈ ಬಾರಿ ಮತದಾರರು ಸರಣಿಯಲ್ಲಿ ನಿಂತು ಮತಚಲಾಯಿಸಿದ್ದಾರೆ. ಇವರ ಆಯ್ಕೆ ಶಾಸಕರು ಯಾರಾಗಬಹುದು ಎಂಬುದೇ ಈಗಿನ ಕುತೂಹಲ.
ಬಿಸಿಲಿನ ತಾಪಕ್ಕೆ ಮತದಾರ ತತ್ತರ
ಗುಲ್ಬರ್ಗ/ಶಹಾಬಾದ್: ಸಿಮೆಂಟ್ ನಗರಿ ಶಹಾಬಾದ್, ವಾಡಿಯಲ್ಲಿ ಸೂರ್ಯ ಕೆಂಡದುಂಡೆಯಾಗಿದ್ದರಿಂದ ಬಿಸಿಲಿನ ತಾಪಕ್ಕೆ ಮತದಾರರು ತತ್ತರಿಸಿ, ಮತದಾನ ಮಂದಗತಿಯಲ್ಲಿ ನಡೆದರೆ, ಮತ ಕೇಂದ್ರದಲ್ಲಿದ್ದ ಅಧಿಕಾರಿಗಳು ಉಸ್ಸಪ್ಪ ಎನ್ನುವಂತಾಗಿತ್ತು. ಬೆಳಗ್ಗೆ 7ಗಂಟೆಗೆ ನಗರದ ಎಲ್ಲ ಮತಕೇಂದ್ರಗಳಲ್ಲಿ ಮತದಾನ ಪ್ರಾರಂಭವಾಗುತ್ತಿದ್ದಂತೆ ಜನರು ಹೆಚ್ಚು ಜನ ಮತದಾನ ಮಾಡತೊಡಗಿದರು. ನಂತರ ಸೂರ್ಯ ಮೇಲೆರುತ್ತಿದ್ದಂತೆ ಮತಗಟ್ಟೆಗಳಲ್ಲಿ ಜನರು ಮತದಾನಕ್ಕೆ ಬರುವುದು ಮಂದಗತಿಯಾಗುತ್ತಿದ್ದಂತೆ, ಮತಗಟ್ಟೆಗಳು ಭಣಗುಟ್ಟತೊಡಗಿತ್ತು. ಮಧ್ಯಾಹ್ನದ ವೇಳೆಗೆ ಬಿಸಿಲು ಕೆಂಡದುಂಡೆಯಾಗುತ್ತಿದ್ದಂತೆ ಬೆಳಗ್ಗೆಯಿಂದ ಉತ್ಸಾಹದಿಂದ ಓಡಾಡುತ್ತಿದ್ದ ಪಕ್ಷಗಳ ಕಾರ್ಯಕರ್ತರು ನೆರಳನ್ನು ಹುಡುಕಿಕೊಂಡು ಹೋದರೆ, ಮತಕೇಂದ್ರದಲ್ಲಿದ್ದ ಅಧಿಕಾರಿಗಳು ಸೆಕೆ ತಾಳದೆ ಗಾಳಿಗಾಗಿ ಹೊರಗೆ - ಒಳಗೆ ಓಡಾಡುತ್ತಿದ್ದರು. ಪೊಲೀಸರು, ಕೇಂದ್ರ ಮೀಸಲು ಪೊಲೀಸರು ಬಿಸಿಲಿನ ತಾಪಕ್ಕೆ ತತ್ತರಿಸುವಂತಾಗಿತ್ತು. ಸಂಜೆ ನಾಲ್ಕು ಗಂಟೆವರೆಗೆ ಮಂದಗತಿಯಲ್ಲಿದ್ದ ಮತದಾನ ನಾಲ್ಕರ ನಂತರ ಮತ್ತೆ ಸ್ವಲ್ಪಮಟ್ಟಿಗೆ ಚುರುಕುಗೊಂಡಿತು.