ಸಮರ್ಪಕ ಚರಂಡಿ ನಿರ್ಮಿಸಲು ಆಗ್ರಹ
ಯಾದಗಿರಿ: ಶಹಾಪುರ ತಾಲೂಕಿನ ವಡಗೇರಾದ ಬಸವನಗರದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ತ್ಯಾಜ್ಯ ನೀರು ಹಾಗೂ ಸಾರ್ವಜನಿಕ ಬೋರ್ವೆಲ್ ನೀರು ಗ್ರಾಮಸ್ಥರ ಮನೆಯ ಮುಂದೆ ಹರಿಯುತ್ತಿದ್ದು, ಜನ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಗ್ರಾಮಸ್ಥರಲ್ಲಿ ನಿತ್ಯವೂ ಜಗಳಕ್ಕೆ ಕಾರಣವಾಗುತ್ತಿದ್ದು, ಶೀಘ್ರದಲ್ಲಿ ಇದಕ್ಕೆ ಮುಕ್ತಿ ಕಾಣಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮನೆ ಮಾಲೀಕನ ಮಾನವೀಯತೆ: ಸಾರ್ವಜನಿಕ ಬೋರ್ವೆಲ್ ನೀರು ಹಾಗೂ ಚರಂಡಿಯ ನೀರು ತಮ್ಮ ಮನೆಯ ಮುಂದೆ ಹರಿಯುತ್ತಿರುವುದನ್ನು ಸಹಿಸದ ಮನೆಯ ಮಾಲೀಕ ಭಾನುವಾರ ಬೋರ್ವೆಲ್ ನೀರು ಬರುವ ಕೊಳಾಯಿಗೆ ಕಟ್ಟಿಗೆಯ ತುಂಡನ್ನು ಹೊಡೆದ ಘಟನೆಯೂ ಜರುಗಿದೆ. ಆಗ ಗ್ರಾಮಸ್ಥರೆಲ್ಲ ಸೇರಿ, ಈಗ ಬೇಸಿಗೆ ಕಾಲವಾಗಿರುವುದರಿಂದ ಬೋರ್ವೆಲ್ಗೆ ಕಟ್ಟಿಗೆಯ ತುಂಡು ಹೊಡೆದರೆ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು. ಆಗ ಮನೆಯ ಮಾಲೀಕ ಸುಮ್ಮನಾದರು.
ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳಿವೆ. ಆದರೆ ಎಲ್ಲಿಯೂ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆಯ ಬಚ್ಚಲು ನೀರು ಹಾಗೂ ಬೋರ್ವೆಲ್ ನೀರು ಮನೆಯ ಅಂಗಳದಲ್ಲಿ ಹರಿಯುತ್ತಿರುವುದರಿಂದ ದಿನಾಲೂ ಸಾರ್ವಜನಿಕರು ತಮ್ಮ ತಮ್ಮಲ್ಲೇ ಜಗಳವಾಡುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಒಳಚರಂಡಿ ವ್ಯವಸ್ಥೆ ಮಾಡಬೇಕು ಗ್ರಾಮಸ್ಥರು ಆಗ್ರಹಿಸಿದ್ದಾರೆ.